ಹಿಂದೂ ಯುವಕನ ಬರ್ಬರ ಹತ್ಯೆ: 7 ಮಂದಿ ಆರೋಪಿಗಳು ಅರೆಸ್ಟ್‌

Untitled design (33)

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಧರ್ಮನಿಂದನೆಯ ಸುಳ್ಳು ಆರೋಪದ ಮೇಲೆ ಹಿಂದೂ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ‘ರ್ಯಾಪಿಡ್ ಆಕ್ಷನ್ ಬೆಟಾಲಿಯನ್’ (RAB) ಪಡೆ ಮಿಂಚಿನ ಕಾರ್ಯಾಚರಣೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದೆ.

ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಹತ್ಯೆಯಾದ ಯುವಕನನ್ನು ಸ್ಥಳೀಯ ಗಾರ್ಮೆಂಟ್ ಕಾರ್ಖಾನೆಯ ಕಾರ್ಮಿಕ ದೀಪು ಚಂದ್ರದಾಸ್ ಎಂದು ಗುರುತಿಸಲಾಗಿದೆ. ದೀಪು ಚಂದ್ರದಾಸ್ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂದು ಸ್ಥಳೀಯ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಆರೋಪದ ಮೇಲೆ ಸ್ಥಳೀಯರು ದೀಪು ಮೇಲೆ ಹಲ್ಲೆ ಮಾಡಿದ್ದಾರೆ. ಯುವಕನನ್ನು ಹಿಡಿದು ಎಳೆದಾಡಿದ ದುಷ್ಕರ್ಮಿಗಳು, ಆತನನ್ನು ಮರಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಜೊತೆಗೆ ಪೆಟ್ರೊಲ್‌ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ಏಳು ಮಂದಿ ಹಂತಕರ ಬಂಧನ

ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಬೆನ್ನಲ್ಲೇ ಬಾಂಗ್ಲಾದೇಶದ ಭದ್ರತಾ ಪಡೆಗಳು ಈ ಬಗ್ಗೆ ಗಮನಹರಿಸಿದೆ. ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ನಡೆಸಿದ ಕಾರ್ಯಾಚರಣೆಯಲ್ಲಿ ಘಟನೆಯಲ್ಲಿ ಪ್ರಮುಖವಾಗಿ ಭಾಗವಹಿಸಿದ್ದ ಏಳು ಮಂದಿಯನ್ನು ಸೆರೆಹಿಡಿಯಲಾಗಿದೆ. ಬಂಧಿತರನ್ನು ಮೊಹಮ್ಮದ್ ಲಿಮೋನ್, ಮೊಹಮ್ಮದ್ ತಾರೆಕ್ ಹುಸೇನ್, ಮೊಹಮ್ಮದ್ ಮಾನಿಕ್ ಮಿಯಾ, ಇರ್ಷಾದ್ ಅಲಿ, ನಿಜುಮ್, ಅಲಂಗೀರ್ ಹುಸೇನ್ ಮತ್ತು ಮೊಹಮ್ಮದ್ ಮಿರಾಜ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಧರ್ಮದವರ ಮೇಲೆ ದೌರ್ಜನ್ಯ ನಡೆದರೂ ಸಹಿಸುವುದಿಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಮೊಹಮ್ಮದ್ ಯೂನಸ್ ಭರವಸೆ ನೀಡಿದ್ದಾರೆ. ಆದರೆ, ಬಾಂಗ್ಲಾದೇಶದಲ್ಲಿ ಸತತವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಅಲ್ಲಿನ ಅಲ್ಪಸಂಖ್ಯಾರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version