ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಭೀಕರ ಸ್ವರೂಪ ಪಡೆದುಕೊಳ್ಳುತ್ತಿವೆ. ಈಗಾಗಲೇ 5 ಮಂದಿ ಹಿಂದೂ ವ್ಯಕ್ತಿಗಳ ಹತ್ಯೆಯ ಬೆನ್ನಲ್ಲೇ, ಮಧ್ಯ ಬಾಂಗ್ಲಾದೇಶದ ಜಿನೈದಾದ ಕಾಳಿಗಂಜ್‌ನಲ್ಲಿ 40 ವರ್ಷದ ಹಿಂದೂ ಮಹಿಳೆಯೊಬ್ಬರ ಮೇಲೆ ಕ್ರೂರವಾಗಿ ದೌರ್ಜನ್ಯ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ದೌರ್ಜನ್ಯ
ಸಂತ್ರಸ್ತ ಮಹಿಳೆ ಸುಮಾರು ಎರಡೂವರೆ ವರ್ಷಗಳ ಹಿಂದೆ ಶಹೀನ್ ಎಂಬಾತನಿಂದ ಜಮೀನು ಖರೀದಿಸಿ ಮನೆ ಕಟ್ಟಿಕೊಂಡಿದ್ದರು. ಅಂದಿನಿಂದಲೂ ಆರೋಪಿ ಶಹೀನ್ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜನವರಿ 3ರಂದು ಗಲಾಟೆ ಹೆಚ್ಚಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಶಹೀನ್ ಮತ್ತು ಆತನ ಸಹಚರ ಹಸನ್ ಎಂಬುವವರು ಮಹಿಳೆಯ ಮನೆಗೆ ನುಗ್ಗಿ ಹಣದ ಬೇಡಿಕೆಯಿಟ್ಟಿದ್ದಾರೆ. ಸುಮಾರು 50,000 ಟಕಾ (₹37,000) ನೀಡುವಂತೆ ಬೆದರಿಕೆ ಹಾಕಿದ್ದಾರೆ.
ಮಹಿಳೆ ಹಣ ನೀಡಲು ನಿರಾಕರಿಸಿದಾಗ, ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೇ ನಿಲ್ಲದ ಇವರ ವಿಕೃತಿ, ಮಹಿಳೆಯನ್ನು ಮನೆಯ ಹೊರಗಿನ ಮರಕ್ಕೆ ಕಟ್ಟಿ ಹಾಕಿ, ಎಲ್ಲರೆದುರೇ ಆಕೆಯ ಕೂದಲನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಈ ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದಾರೆ.
ಪೊಲೀಸ್ ಕ್ರಮ
ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ನನ್ನನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದರು, ಕೂದಲು ಕತ್ತರಿಸಿದರು ಈ ದೃಶ್ಯವನ್ನ ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ಅಂತರಾಷ್ಟ್ರೀಯ ಆತಂಕ
ಬಾಂಗ್ಲಾದೇಶದಲ್ಲಿ ಖೋಕೋನ್ ಚಂದ್ರ ದಾಸ್ ಅವರ ಹತ್ಯೆಯ ಬೆನ್ನಲ್ಲೇ ಈ ಘಟನೆ ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಭಾರತ ಸರ್ಕಾರವು ಈ ಬೆಳವಣಿಗೆಗಳನ್ನು ಅತ್ಯಂತ ಕಳವಳದಿಂದ ಗಮನಿಸುತ್ತಿದ್ದು, ಅಲ್ಲಿನ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕಟ್ಟುನಿಟ್ಟಿನ ಆಗ್ರಹ ಮಾಡಿದೆ. ಮಾನವ ಹಕ್ಕುಗಳ ಸಂಘಟನೆಗಳು ಸಹ ಈ ಭೀಕರ ಕೃತ್ಯವನ್ನು ಖಂಡಿಸಿವೆ.
