ವಿದ್ಯಾರ್ಥಿಗಳ ದಂಗೆಯ ಬಳಿಕ ಬಾಂಗ್ಲಾದೇಶದಲ್ಲಿ ಇಂದು ಚುನಾವಣೆ

ಶೇಖ್ ಹಸೀನಾ ಆಡಳಿತ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಇಂದು ಚುನಾವಣೆ

Untitled design 2026 02 12T084738.959

ಢಾಕಾ: 2024ರಲ್ಲಿ ನಡೆದ ಭಾರೀ ರಾಜಕೀಯ ಅಶಾಂತಿ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತ ಪತನದ ಬಳಿಕ, ಬಾಂಗ್ಲಾದೇಶ ಇಂದು ತನ್ನ ಭವಿಷ್ಯ ನಿರ್ಧರಿಸುವ ಮಹತ್ವದ ರಾಷ್ಟ್ರೀಯ ಚುನಾವಣೆಯನ್ನು ಎದುರಿಸುತ್ತಿದೆ. ಸುಮಾರು 18 ತಿಂಗಳ ಮಧ್ಯಂತರ ಆಡಳಿತದ ನಂತರ ನಡೆಯುತ್ತಿರುವ ಈ ಚುನಾವಣೆ ದೇಶದ ರಾಜಕೀಯ ದಿಕ್ಕು ಮತ್ತು ವಿದೇಶಾಂಗ ನೀತಿಗೆ ಮಹತ್ವದ ತಿರುವು ನೀಡಲಿದೆ ಎನ್ನಲಾಗಿದೆ.

ಇಂದು ಬೆಳಗ್ಗೆ 7:30ರಿಂದ ದೇಶಾದ್ಯಂತ 42,700ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಸಂಜೆ 4:30ರವರೆಗೆ ಮತದಾನ ನಡೆಯಲಿದ್ದು, ಫೆಬ್ರವರಿ 13ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ದಾಖಲೆ ಪ್ರಮಾಣದ ಮೊದಲ ಬಾರಿಗೆ ಮತಹಾಕುವ ಯುವ ಮತದಾರರು ಸೇರಿ ಒಟ್ಟು 12.77 ಕೋಟಿ ಮತದಾರರು ನೋಂದಾಯಿಸಿಕೊಂಡಿದ್ದಾರೆ.

ಶೇಖ್ ಹಸೀನಾ ಅವರ 15 ವರ್ಷಗಳ ನಿರಂತರ ಆಡಳಿತ ಕಳೆದ ವರ್ಷ ಭಾರಿ ಪ್ರತಿಭಟನೆಗಳ ನಡುವೆ ಕುಸಿತ ಕಂಡಿತ್ತು. ಅದರ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ಸ್ವೀಕರಿಸಿತ್ತು. ಆದರೆ ಯೂನಸ್ ಆಡಳಿತದ ಅವಧಿಯಲ್ಲಿ ದೇಶದ ಆಂತರಿಕ ಶಾಂತಿ ಮತ್ತು ಅಲ್ಪಸಂಖ್ಯಾತರ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹುಟ್ಟಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿ, ಕೆಲವು ಉಗ್ರ ಗುಂಪುಗಳು ಹಿಂದೂ ಸಮುದಾಯದ ಮನೆಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆಸಿದ ಘಟನೆಗಳು ವರದಿಯಾಗಿವೆ. ಭಾರತ ಸರ್ಕಾರವು ಕೂಡ ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶ ಸರ್ಕಾರವನ್ನು ಪದೇ ಪದೇ ಮನವಿ ಮಾಡಿತ್ತು.

ಇದರ ಜೊತೆಗೆ, ಯೂನಸ್ ಆಡಳಿತದ ವಿದೇಶಾಂಗ ನೀತಿಯಲ್ಲಿ ಕಂಡುಬಂದ ಬದಲಾವಣೆಗಳು ಗಮನ ಸೆಳೆದಿವೆ. ಭಾರತದಿಂದ ಸ್ವಲ್ಪ ದೂರ ಸರಿದು ಪಾಕಿಸ್ತಾನ ಮತ್ತು ಚೀನಾಕ್ಕೆ ಹತ್ತಿರವಾದ ನಿರ್ಧಾರಗಳು ದಕ್ಷಿಣ ಏಷ್ಯಾದ ರಾಜಕೀಯ ಸಮೀಕರಣದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಹಿನ್ನೆಲೆ, ಇಂದಿನ ಚುನಾವಣೆ ಕೇವಲ ಸರ್ಕಾರ ಬದಲಾವಣೆ ಮಾತ್ರವಲ್ಲ, ಬಾಂಗ್ಲಾದೇಶದ ಭವಿಷ್ಯದ ದಿಕ್ಕು ತೋರಿಸುವ ಘಟನೆಯಾಗಿದೆ.

ಈ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ. ಖಲೀದಾ ಜಿಯಾ ಅವರ ಪಕ್ಷದಿಂದ ತಾರಿಕ್ ರೆಹಮಾನ್ ಪ್ರಧಾನಿ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿ ಇದ್ದಾರೆ ಎಂದು ವರದಿಗಳು ಸೂಚಿಸುತ್ತಿವೆ. ಸಮೀಕ್ಷೆಗಳ ಪ್ರಕಾರ ಬಿಎನ್‌ಪಿ ಗೆಲುವಿನ ನಿರೀಕ್ಷೆಯಲ್ಲಿದ್ದರೂ, ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ಕಠಿಣ ಪೈಪೋಟಿ ನೀಡುತ್ತಿದೆ. ಒಂದು ಕಾಲದಲ್ಲಿ ಬಿಎನ್‌ಪಿಯ ಮಿತ್ರ ಪಕ್ಷವಾಗಿದ್ದ ಜಮಾತ್, ಈಗ ಸ್ವತಂತ್ರವಾಗಿ ಕಣಕ್ಕಿಳಿದು ನೆಕ್-ಟು-ನೆಕ್ ಹೋರಾಟ ನಡೆಸುತ್ತಿದೆ.

ಇನ್ನೊಂದೆಡೆ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಮಧ್ಯಂತರ ಸರ್ಕಾರ ವಿಸರ್ಜಿಸಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿಸಿದೆ. ಇದರಿಂದ ರಾಜಕೀಯ ಸಮೀಕರಣ ಸಂಪೂರ್ಣ ಬದಲಾಗಿದ್ದು, ಈ ಬಾರಿ ಸ್ಪಷ್ಟ ಬಹುಮತ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Exit mobile version