ಮುಸ್ಥಾಫಿಝುರ್‌ ವಿವಾದ: ಐಪಿಎಲ್ ಪ್ರಸಾರ ಮತ್ತು ಪ್ರಚಾರ ನಿಷೇಧಿಸಿದ ಬಾಂಗ್ಲಾದೇಶ

Untitled design 2026 01 05T185151.831

ಢಾಕಾ: ಐಪಿಎಲ್ 2026ರ ಆವೃತ್ತಿಯಿಂದ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಸರ್ಕಾರವು ತನ್ನ ದೇಶದಲ್ಲಿ ಐಪಿಎಲ್ ಪ್ರಸಾರ ಮತ್ತು ಜಾಹೀರಾತಿನ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ.

ವಿವಾದದ ಕಿಡಿ ಹತ್ತಿದ್ದೆಲ್ಲಿ?

ಮುಂಬರುವ ಐಪಿಲ್‌ಗಾಗಿ ಹರಾಜಿನಲ್ಲಿ ಕೆಕೆಆರ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಭಾರತದಲ್ಲಿನ ಕೆಲವು ರಾಜಕೀಯ ಒತ್ತಡಗಳು ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿಚಾರವಾಗಿ ಎದ್ದಿರುವ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಬಿಸಿಸಿಐ ನಿರ್ದೇಶನದಂತೆ ಕೆಕೆಆರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಬಿಸಿಸಿಐನ ಈ ಅನಿರೀಕ್ಷಿತ ನಿರ್ಧಾರದಿಂದ ಬಾಂಗ್ಲಾದೇಶದ ಕ್ರಿಕೆಟ್‌ ಪ್ರೇಮಿಗಳು ಹಾಗೂ ಬಾಂಗ್ಲಾದೆಶದ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಾಂಗ್ಲಾ ಸರ್ಕಾರದ ಅಧಿಕೃತ ಆದೇಶ

ಜನವರಿ 5ರಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಆದೇಶದಂತೆ, ಐಪಿಎಲ್‌ಗೆ ಸಂಬಂಧಿಸಿದ ಯಾವುದೇ ಪಂದ್ಯ ಅಥವಾ ಕಾರ್ಯಕ್ರಮಗಳನ್ನು ದೇಶದಲ್ಲಿ ಪ್ರಸಾರ ಮಾಡುವಂತಿಲ್ಲ. ನಮ್ಮ ರಾಷ್ಟ್ರೀಯ ಹೀರೋ ಮುಸ್ತಾಫಿಜುರ್ ಅವರನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕೈಬಿಟ್ಟಿರುವುದು ಬಾಂಗ್ಲಾದೇಶದ ಜನರಿಗೆ ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಐಪಿಎಲ್ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಟಿ20 ವಿಶ್ವಕಪ್ ಮೇಲೂ ಕಾರ್ಮೋಡ

ಈ ವಿವಾದವು ಕೇವಲ ಐಪಿಎಲ್‌ಗೆ ಸೀಮಿತವಾಗಿಲ್ಲ. 2026ರ ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಐಸಿಸಿ ಟಿ20 ವಿಶ್ವಕಪ್ ಮೇಲೂ ಇದರ ಪ್ರಭಾವ ಬೀರಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಐಸಿಸಿಗೆ ತಿಳಿಸಿದೆ. ಇದರ ಜೊತೆಗೆ ಮೂಲತಃ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಒತ್ತಾಯಿಸಿದೆ ಹೀಗಾಗಿ ಆಟಗಾರರ ಭದ್ರತೆಯ ಬಗ್ಗೆ ನಂಬಿಕೆ ಕುಸಿದಿದೆ ಎಂದು ಬಾಂಗ್ಲಾ ಆಡಳಿತ ಹೇಳುತ್ತಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಇಷ್ಟು ಸಣ್ಣ ಅವಧಿಯಲ್ಲಿ ಪಂದ್ಯಗಳನ್ನು ಸ್ಥಳಾಂತರಿಸುವುದು ತಾಂತ್ರಿಕವಾಗಿ ಮತ್ತು ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ. ಈ ಬಿಕ್ಕಟ್ಟು ಮುಂದುವರಿದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸಂಬಂಧಗಳು ಪಾಕಿಸ್ತಾನ ಶೈಲಿಯಲ್ಲಿ ತೀವ್ರ ಬಿಕ್ಕಟ್ಟಾಗುವುದು ಖಚಿತ.

Exit mobile version