3I/ATLAS: ಭೂಮಿ ಅಧ್ಯಯನಕ್ಕೆ ಬಂದ ಏಲಿಯನ್‌ ಶಿಪ್‌?; ಹಾರ್ವರ್ಡ್‌ ವಿಜ್ಞಾನಿಯ ಸ್ಫೋಟಕ ಹೇಳಿಕೆ!

Untitled design

ವಾಷಿಂಗ್ಟನ್‌ ಡಿಸಿ: ನಮ್ಮ ಸೌರಮಂಡಲವನ್ನು ಪ್ರವೇಶಿಸಿರುವ 3I/ATLAS ಹೆಸರಿನ ಅಂತರತಾರಾ ಧೂಮಕೇತು ಕುರಿತು ಹಾರ್ವರ್ಡ್‌ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಪ್ರೊ. ಅವಿ ಲೋಬ್ ಅಚ್ಚರಿ ಮೂಡಿಸುವ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಇದು ಸಾಮಾನ್ಯ ಧೂಮಕೇತು ಅಲ್ಲ, ಬದಲಾಗಿ ಪರಗ್ರಹ ಜೀವಿಗಳಿಂದ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆ — “ಏಲಿಯನ್‌ ಶಿಪ್‌”!  ಎಂದು ಹೇಳಿದ್ದಾರೆ.

ನಾಸಾದ ಪ್ರಕಾರ, 3I/ATLAS ನಮ್ಮ ಸೌರವ್ಯೂಹವನ್ನು ಪ್ರವೇಶಿಸಿದ ಮೂರನೇ ಅಂತರತಾರಾ ವಸ್ತು. ಇದನ್ನು ಕಳೆದ ಜುಲೈ ತಿಂಗಳಲ್ಲಿ ಚಿಲಿಯ ಡೀಪ್ ರ‍್ಯಾಂಡಮ್ ಸರ್ವೇ ದೂರದರ್ಶಕದಿಂದ ಪತ್ತೆ ಮಾಡಲಾಯಿತು. ಭೂಮಿಯಿಂದ 1.8 ಖಗೋಳ ಘಟಕ (ಸುಮಾರು 270 ಮಿಲಿಯನ್ ಕಿ.ಮೀ) ದೂರದಲ್ಲಿರುವ ಇದು, ಅಕ್ಟೋಬರ್ 30, 2025ರಂದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ಗಂಟೆಗೆ 245,000 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಈ ವಸ್ತು ಮುಂದಿನ ಎರಡು ತಿಂಗಳಲ್ಲಿ ನಮ್ಮ ಸೌರವ್ಯೂಹದಿಂದ ಹೊರಬರುವ ನಿರೀಕ್ಷೆ ಇದೆ.

ನಾಸಾದ ನಿಲುವು Vs ಅವಿ ಲೋಬ್ ವಾದ

ನಾಸಾ 3I/ATLAS ಅನ್ನು ದೊಡ್ಡ ಕ್ಷುದ್ರಗ್ರಹ ಅಥವಾ ಸಂಭಾವ್ಯ ಧೂಮಕೇತು ಎಂದು ವರ್ಣಿಸಿದ್ದು, ಇದು ಭೂಮಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ಹೇಳಿದೆ. ಆದರೆ ಹಾರ್ವರ್ಡ್‌ನ ಖಗೋಳ ವಿಭಾಗದ ಮುಖ್ಯಸ್ಥರಾದ ಪ್ರೊ. ಲೋಬ್ ಈ ವಿವರಣೆಯನ್ನು ತಳ್ಳಿಹಾಕಿದ್ದಾರೆ.

ಅವರ ಪ್ರಕಾರ, 3I/ATLAS ಸಾಮಾನ್ಯ ಧೂಮಕೇತುಗಳಂತೆ ಉದ್ದವಾದ ಬಾಲ ಹೊಂದಿಲ್ಲ. ಬದಲಾಗಿ, ಇದರ ಮುಂಭಾಗ ಮಾತ್ರ ಪ್ರಕಾಶಮಾನವಾಗಿದೆ. “ಈ ಗುಣಲಕ್ಷಣಗಳು ನೈಸರ್ಗಿಕ ಧೂಮಕೇತುಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ಅನ್ಯಲೋಕದ ಬುದ್ಧಿವಂತ ನಾಗರಿಕತೆ ನಿರ್ಮಿಸಿದ ಎಂಜಿನಿಯರ್ಡ್ ಪ್ರೋಬ್ ಆಗಿರಬಹುದು” ಎಂದು ಅವರು ಹೇಳಿದ್ದಾರೆ.

ಏಲಿಯನ್‌ ತಂತ್ರಜ್ಞಾನದ ಸುಳಿವು?

2017ರಲ್ಲಿ ಪತ್ತೆಯಾದ ಓಮುವಾಮುವಾ ಎಂಬ ಅಂತರತಾರಾ ವಸ್ತು ಕೂಡ ಇದೇ ರೀತಿಯ ಚರ್ಚೆಗೆ ಕಾರಣವಾಗಿತ್ತು. ಆ ಸಮಯದಲ್ಲಿಯೂ ಇದು ಏಲಿಯನ್‌ ಶಿಪ್‌ ಆಗಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದರೂ, ಯಾವುದೇ ದೃಢವಾದ ಸಾಕ್ಷ್ಯ ದೊರೆಯಲಿಲ್ಲ. ಈ ಬಾರಿ 3I/ATLAS ಕುರಿತು ಲೋಬ್ ಅವರ ಬ್ಲಾಗ್‌ ಬರಹ ಜಾಗತಿಕ ಮಟ್ಟದಲ್ಲಿ ಕುತೂಹಲ ಹುಟ್ಟಿಸಿದೆ.

ಅವರ ಪ್ರಕಾರ, ಇದರ ಹೈಪರ್ಬೋಲಿಕ್‌ ಕಕ್ಷೆ ಮತ್ತು ಅನಿಲ ಅಣುಗಳ ವಿಶ್ಲೇಷಣೆ ಗೊಂದಲಮಯವಾಗಿವೆ. “ಇದರ ಪಥವು ಸೌರಮಂಡಲದ ಗ್ರಹಗಳನ್ನು ಅಧ್ಯಯನ ಮಾಡಲು ಉದ್ದೇಶಿತವಾಗಿರಬಹುದು” ಎಂದು ಲೋಬ್ ತಿಳಿಸಿದ್ದಾರೆ. ಅವರು ಎಚ್ಚರಿಕೆ ನೀಡುತ್ತಾ, “ಇದು ಭೂಮಿಯನ್ನು ಉಳಿಸಲು ಬಂದಿರಬಹುದು ಅಥವಾ ನಾಶಮಾಡಲು ಕೂಡ. ನಾವು ಎರಡಕ್ಕೂ ಸಿದ್ಧರಾಗಿರಬೇಕು” ಎಂದಿದ್ದಾರೆ.

ಲೋಬ್ ಅವರ ಹೇಳಿಕೆ ವಿಜ್ಞಾನ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆ. ನಾಸಾ ಮತ್ತು ಇತರ ಖಗೋಳ ವಿಜ್ಞಾನಿಗಳು ಇದನ್ನು ಸಹಜ ಅಂತರತಾರಾ ವಸ್ತು ಎಂದು ಪರಿಗಣಿಸುತ್ತಿರುವಾಗ, ಲೋಬ್ ಮಾತ್ರ ಅನ್ಯಲೋಕದ ತಂತ್ರಜ್ಞಾನ ಸಾಧ್ಯತೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ.

Exit mobile version