ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರ ಬ್ಯಾರಕ್ ಅನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ನಿರ್ದೇಶನದಂತೆ ಬದಲಾಯಿಸಲಾಗಿದೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಇಂದು ಕೈಗೆತ್ತಿಕೊಳ್ಳಲಿದೆ. ಇದೇ ವೇಳೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿರುವ ಪ್ರದೋಶ್ ಅವರ ‘ಮಾಫಿ ಸಾಕ್ಷಿ’ ವಿಚಾರಣೆಗೆ ಸಮನ್ಸ್ ನೀಡುವ ವಿಚಾರದಲ್ಲೂ ಕೋರ್ಟ್‌ನಿಂದ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ
ಪವಿತ್ರಾ ಗೌಡ ಅವರನ್ನು ಈ ಹಿಂದೆ 30ಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳಿದ್ದ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು. ಈ ಬ್ಯಾರಕ್‌ನಲ್ಲಿ ವಯೋವೃದ್ಧರು ಹಾಗೂ ನೈಜೀರಿಯಾ ಮೂಲದ ವಿದೇಶಿ ಖೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನಲಾಗಿದೆ. ಭಾಷೆಯ ತೊಡಕು ಸೇರಿದಂತೆ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಉಲ್ಲೇಖಿಸಿ ಪವಿತ್ರಾ ಗೌಡ ಅವರು ಬ್ಯಾರಕ್ ಬದಲಾವಣೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ, ಕಡಿಮೆ ಸಂಖ್ಯೆಯ ಖೈದಿಗಳಿರುವ ಬ್ಯಾರಕ್‌ಗೆ ಅವರನ್ನು ವರ್ಗಾಯಿಸುವಂತೆ ಜೈಲು ಆಡಳಿತಕ್ಕೆ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದ ಬಳಿಕ ಜೈಲು ಅಧಿಕಾರಿಗಳು ಪವಿತ್ರಾ ಗೌಡ ಅವರನ್ನು ಕೇವಲ ಐದು ಮಂದಿ ಖೈದಿಗಳಿರುವ ಪ್ರತ್ಯೇಕ ಬ್ಯಾರಕ್‌ಗೆ ಸ್ಥಳಾಂತರಿಸಿದ್ದಾರೆ.
ಇಂದು ಜಾಮೀನು ಅರ್ಜಿ ವಿಚಾರಣೆ
ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಇಂದು ನಡೆಸಲಿದೆ. ಇದೇ ಪ್ರಕರಣದಲ್ಲಿ 6ನೇ ಆರೋಪಿ ಜಗದೀಶ್ ಮತ್ತು 7ನೇ ಆರೋಪಿ ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರಣೆಯೂ ನಡೆಯಲಿದೆ.
ಜಾಮೀನು ನೀಡಬಾರದು ಎಂದು ರಾಜ್ಯದ ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆ, ಆರೋಪಗಳ ಸ್ವರೂಪ ಹಾಗೂ ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ ಎರಡೂ ಕಡೆಯ ವಾದಗಳನ್ನು ನ್ಯಾಯಾಲಯ ಪರಿಗಣಿಸಲಿದೆ.
ಪ್ರಮುಖ ಸಾಕ್ಷಿಗಳಿಗೆ ಸಮನ್ಸ್
ಇದೇ ವೇಳೆ ಪ್ರಕರಣದ ಪ್ರಮುಖ ಸಾಕ್ಷಿಗಳಾದ 234, 235, 236 ಹಾಗೂ 246ನೇ ಸಾಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಪ್ರಕರಣದ ವಿಚಾರಣೆಯ ಮುಂದಿನ ಹಂತದಲ್ಲಿ ಈ ಸಾಕ್ಷಿದಾರರ ಹೇಳಿಕೆಗಳು ದಾಖಲಾಗಬೇಕಿದೆ.
ಮತ್ತೊಂದೆಡೆ, ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವೈದ್ಯಕೀಯ ತಪಾಸಣಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರದೋಶ್ ‘ಮಾಫಿ ಸಾಕ್ಷಿ’ ಆಗಲಿದ್ದಾರಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ ಆರೋಪಿ ಪ್ರದೋಶ್ ಅವರು ಸರ್ಕಾರಿ ಅಭಿಯೋಜಕರ ಪರ ‘ಮಾಫಿ ಸಾಕ್ಷಿ’ ಅಥವಾ ‘ಅಪೂವರ್’ ಆಗಿ ಹೇಳಿಕೆ ನೀಡುವ ಪ್ರಕ್ರಿಯೆ ಮುಂದುವರಿದಿದೆ. ಈ ಸಂಬಂಧ ವಿಚಾರಣೆ ನಡೆಸಲು ಸೆಪ್ಟೆಂಬರ್ 23ರಂದು ಸಮನ್ಸ್ ನೀಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆದರೆ ಈ ಪ್ರಕ್ರಿಯೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ದೇಶಿಸಿರುವುದಾಗಿ ದರ್ಶನ್ ಪರ ವಕೀಲರು ತಿಳಿಸಿದ್ದಾರೆ. ಹೀಗಾಗಿ ಸಮನ್ಸ್ ವಿಚಾರಣೆಯ ದಿನಾಂಕವನ್ನು ಮುಂದೂಡಬೇಕು ಎಂದು ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು, ಸಮನ್ಸ್ ನಿಗದಿಪಡಿಸುವ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ಈ ವಿಚಾರದಲ್ಲೂ ಇಂದು ಆದೇಶ ಹೊರಬೀಳುವ ಸಾಧ್ಯತೆಯಿದೆ.
