ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚು ಹರಿಸೋಕೆ ಬರ್ತಿದ್ದಾರೆ. ಲಕ್ಷ್ಮೀಪುತ್ರ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದ್ದು.. ಟ್ರೈಲರ್ ಹಾಗೂ ಸಾಂಗ್ಸ್ನಿಂದ ಸಖತ್ ಸೌಂಡ್ ಮಾಡ್ತಿದೆ. ರಿಲೀಸ್ಗೂ ಮುನ್ನ ನಾರ್ತ್ ಕರ್ನಾಟಕ ಒಂದು ರೌಂಡ್ ಹಾಕ್ತಿರೋ ಲಕ್ಷ್ಮೀಪುತ್ರ ಚಿಕ್ಕು & ಟೀಂ.. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ, ಹೊಸಪೇಟೆ, ಧಾರವಾಡ, ದಾವಣಗೆರೆ ಮಂದಿಗೆ ಥಿಯೇಟರ್ಗೆ ಆಮಂತ್ರಣ ನೀಡಿದ್ದಾರೆ.
- ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್
- ಕಾಲೇಜ್ ಸ್ಟೂಡೆಂಟ್ಸ್ ಜೊತೆ ಚಿಕ್ಕು ಫನ್ಫುಲ್ ಜಾಲಿ ರೈಡ್
- ಚಂದ್ರಕಲಾ ಥಿಯೇಟರ್.. ಅಪ್ಪುನ ನೆನೆದ ನ್ಯಾಚುರಲ್ ಸ್ಟಾರ್
- ಫ್ಯಾಮಿಲಿ ಆಡಿಯೆನ್ಸ್ಗೆ ಅಚ್ಚುಮೆಚ್ಚು ಕಾಮಿಡಿ ಸ್ಟಾರ್ ಚಿಕ್ಕಣ್ಣ
ಕಾಮಿಡಿ ಕಿಂಗ್ ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ಲಕ್ಷ್ಮಿ ಪುತ್ರ. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಚಿತ್ರತಂಡ ಭರ್ಜರಿ ಪ್ರಚಾರದ ಅಖಾಡಕ್ಕೆ ಇಳಿದಿದೆ. ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಲಗ್ಗೆ ಇಟ್ಟಿದ್ದ ಚಿಕ್ಕಣ್ಣ, ನಾಯಕಿ ವಂದಿತಾ ಗೌಡ, ನಟ ಧರ್ಮಣ್ಣ ಹಾಗೂ ನಿರ್ಮಾಪಕಿ ಅನ್ನಪೂರ್ಣ ಎ.ಪಿ. ಅರ್ಜುನ್ ಅವರನ್ನೊಳಗೊಂಡ ತಂಡ ಇಡೀ ದಿನ ಭರ್ಜರಿ ಕ್ಯಾಂಪೇನ್ ನಡೆಸಿದೆ. ಪ್ರಚಾರದ ಭಾಗವಾಗಿ ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಭೇಟಿ ನೀಡಿದ ತಂಡಕ್ಕೆ ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆಗಳ ಮೂಲಕ ಗ್ರ್ಯಾಂಡ್ ವೆಲ್ಕಮ್ ನೀಡಿದರು. ಯುವ ಸಮೂಹದೊಂದಿಗೆ ಸಂವಾದ ನಡೆಸಿದ ಚಿಕ್ಕಣ್ಣ, ತಮ್ಮದೇ ಸ್ಟೈಲ್ನಲ್ಲಿ ಪಂಚ್ ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಇನ್ನು ಹುಬ್ಬಳ್ಳಿ ಪ್ರಚಾರದ ವೇಳೆ ಮಾತನಾಡಿದ ನಟ ಚಿಕ್ಕಣ್ಣ, ಹುಬ್ಬಳ್ಳಿಯೊಂದಿಗಿನ ತಮ್ಮ ಹಳೆಯ ಹಾಗೂ ಭಾವನಾತ್ಮಕ ನಂಟನ್ನು ಮೆಲುಕು ಹಾಕಿದರು. ಈ ಹಿಂದೆ ಜಿಗರ್ಥಂಡಾ ಸಿನಿಮಾದ ಶೂಟಿಂಗ್ಗಾಗಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಹಳೆಯ ಚಂದ್ರಕಲಾ ಥಿಯೇಟರ್ಗೆ ಬಂದಿದ್ದ ದಿನಗಳನ್ನು ಚಿಕ್ಕಣ್ಣ ನೆನಪಿಸಿಕೊಂಡರು. ಅಂದಿನ ಶೂಟಿಂಗ್ ಅನುಭವ ಹಾಗೂ ಉತ್ತರ ಕರ್ನಾಟಕದ ಜನರು ತಮಗೆ ತೋರಿದ ಪ್ರೀತಿಯನ್ನು ಹಂಚಿಕೊಂಡ ಚಿಕ್ಕಣ್ಣ, ಈಗ ಹೀರೋ ಆಗಿ ಅದೇ ನೆಲಕ್ಕೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಯಶಸ್ವಿ ಪ್ರಚಾರದ ಬೆನ್ನಲ್ಲೇ ಲಕ್ಷ್ಮಿ ಪುತ್ರ ತಂಡ ರಾಜ್ಯದ ಇತರ ಪ್ರಮುಖ ಜಿಲ್ಲೆಗಳಿಗೂ ಲಗ್ಗೆ ಇಡುವ ಪ್ಲಾನ್ ಸಿದ್ಧಪಡಿಸಿದೆ. ಬೆಳಗಾವಿ, ದಾವಣಗೆರೆ, ಮೈಸೂರು, ಹೊಸಪೇಟೆ ಹಾಗೂ ಮಂಡ್ಯ ಭಾಗದ ಕಾಲೇಜುಗಳು ಮತ್ತು ಥಿಯೇಟರ್ಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ನೇರವಾಗಿ ಸಂವಾದ ನಡೆಸಲು ಚಿತ್ರತಂಡ ಸಜ್ಜಾಗಿದೆ. ಎ.ಪಿ. ಅರ್ಜುನ್ ಅವರ ಕಥೆ-ಸಾಹಿತ್ಯ ಹಾಗೂ ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಸಿನಿಮಾ ಇದೇ ಬರುವ ನವೆಂಬರ್ 27, 2026 ರಂದು ರಾಜ್ಯಾದ್ಯಂತ ಬರೋಬ್ಬರಿ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲು ಕಂಪ್ಲೀಟ್ ರೆಡಿಯಾಗಿದೆ.
ನಟ ಚಿಕ್ಕಣ್ಣ ಅವರ ಸಿನಿಮಾ ಪಯಣದಲ್ಲಿ ಲಕ್ಷ್ಮಿ ಪುತ್ರ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ಮೈಲಿಗಲ್ಲಾಗಿದೆ. ಹಾಸ್ಯ ಕಲಾವಿದನಾಗಿ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ, ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಮೊದಲ ಹೆಜ್ಜೆಯಲ್ಲೇ ಗೆದ್ದು ಬೀಗಿದ್ದರು. ಆದರೆ, ಒಬ್ಬ ಕಾಮಿಡಿ ನಟ ಕೇವಲ ಒನ್-ಟೈಮ್ ವಂಡರ್ ಅಲ್ಲ, ಬದಲಾಗಿ ಸತತವಾಗಿ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗೆಲ್ಲಿಸಬಲ್ಲ ಪಕ್ಕಾ ಕಮರ್ಷಿಯಲ್ ಹೀರೋ ಎಂಬುದನ್ನು ಸಾಬೀತುಪಡಿಸಲು ಈ ಎರಡನೇ ಸಿನಿಮಾ ಅವರಿಗೆ ಅಗ್ನಿಪರೀಕ್ಷೆಯಂತಿದೆ. ಸ್ವತಃ ಶಿವಣ್ಣ ಕೂಡ ‘ಚಿಕ್ಕಣ್ಣ ಇನ್ನೆರಡು ವರ್ಷದಲ್ಲಿ ಸೂಪರ್ ಸ್ಟಾರ್ ಆಗ್ತಾರೆ’ ಅಂತ ಭವಿಷ್ಯ ನುಡಿದಿರುವುದರಿಂದ, ಈ ಚಿತ್ರದ ಗೆಲುವು ಚಿಕ್ಕಣ್ಣ ಅವರನ್ನು ಸ್ಯಾಂಡಲ್ವುಡ್ನ ಟಾಪ್ ಹೀರೋಗಳ ಸಾಲಿಗೆ ಕೊಂಡೊಯ್ಯಲಿದೆ.
ಕೇವಲ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಮಾತ್ರವಲ್ಲದೆ, ಎಂಥವರ ಕಣ್ಣಲ್ಲೂ ನೀರು ತರಿಸುವ ತಾಯಿ-ಮಗನ ಭಾವನಾತ್ಮಕ ಬಾಂಧವ್ಯ ಈ ಚಿತ್ರದ ಜೀವಾಳವಾಗಿದೆ. ತಾಯಿ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಮನೋಜ್ಞವಾಗಿ ಅಭಿನಯಿಸಿದ್ದು, ಅವರೊಂದಿಗೆ ವಂದಿತಾ ಗೌಡ, ಧರ್ಮಣ್ಣ, ಮನು ಹಾಗೂ ಮಿತ್ರ ಕಲಾವಿದರ ದಂಡೇ ಚಿತ್ರದಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಚಾರ್ಟ್ಬಸ್ಟರ್ನಲ್ಲಿ ಸದ್ದು ಮಾಡುತ್ತಿದ್ದು, ಉತ್ತರ ಕರ್ನಾಟಕದ ಭರ್ಜರಿ ರೆಸ್ಪಾನ್ಸ್ನೊಂದಿಗೆ ಲಕ್ಷ್ಮಿ ಪುತ್ರ ನವೆಂಬರ್ 27ರಂದು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್
