ರಾಯಚೂರು: ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ರಾತ್ರಿ ವೇಳೆ ಹೊರಗೆ ಓಡಾಡುವ ಯುವಕ-ಯುವತಿಯರನ್ನು ಗುರಿಯಾಗಿಸಿಕೊಂಡು ಫೋಟೋ, ವಿಡಿಯೋ ಸೆರೆಹಿಡಿದು ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರೇಶ್, ತೌಶೀಫ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈ ಗ್ಯಾಂಗ್ ರಾತ್ರಿ ವೇಳೆ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ಹಿಂಬಾಲಿಸಿ, ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯುತ್ತಿತ್ತು ಎನ್ನಲಾಗಿದೆ. ಬಳಿಕ ಆ ದೃಶ್ಯಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಕೇಳಿದಷ್ಟು ಹಣ ನೀಡದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಡಾಬಾಗೆ ತೆರಳಿದ್ದ ಮೆಡಿಕಲ್ ವಿದ್ಯಾರ್ಥಿ ಟಾರ್ಗೆಟ್
ಇತ್ತೀಚೆಗೆ ಮೆಡಿಕಲ್ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ರಾತ್ರಿ ವೇಳೆ ಡಾಬಾಗೆ ಊಟಕ್ಕೆ ತೆರಳಿದ್ದ ಎನ್ನಲಾಗಿದೆ. ಈ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿ, ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ವಿದ್ಯಾರ್ಥಿಯನ್ನು ತಡೆದು ಕಿರಿಕ್ ತೆಗೆದುಕೊಂಡ ಆರೋಪಿಗಳು, ಫೋಟೋ-ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಿದ್ಯಾರ್ಥಿಯ ಬೈಕ್ ಕೀಯನ್ನು ಕಸಿದುಕೊಂಡು ಕಿರುಕುಳ ನೀಡಿದ್ದು, ಆರಂಭದಲ್ಲಿ ₹30 ಸಾವಿರ ಹಣವನ್ನು ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಹಣ ನೀಡಿದ ಬಳಿಕವೂ ಬೇಡಿಕೆ ನಿಂತಿರಲಿಲ್ಲ ಎನ್ನಲಾಗಿದೆ. ಮತ್ತೆ ಹೆಚ್ಚಿನ ಹಣ ನೀಡುವಂತೆ ಆರೋಪಿಗಳು ಒತ್ತಡ ಹೇರಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
PhonePe, ಆನ್‌ಲೈನ್ ಪೇಮೆಂಟ್‌ಗೆ ಹೆದರಿದ ಆರೋಪಿಗಳು
ಪೊಲೀಸರ ಕೈಗೆ ಸಿಕ್ಕಿಬೀಳದಿರಲು ಆರೋಪಿಗಳು ಹಣ ವಸೂಲಿ ಮಾಡುವಲ್ಲೂ ಹೊಸ ತಂತ್ರ ಬಳಸುತ್ತಿದ್ದರು ಎನ್ನಲಾಗಿದೆ. ನೇರವಾಗಿ PhonePe ಅಥವಾ ಇತರ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮೂಲಕ ಹಣ ಪಡೆದರೆ ಹಣದ ವಹಿವಾಟಿನ ಸುಳಿವು ಸಿಗಬಹುದು ಎಂಬ ಭಯ ಆರೋಪಿಗಳಿಗೆ ಇತ್ತು ಎಂದು ಹೇಳಲಾಗಿದೆ.
ಹೀಗಾಗಿ ಪೆಟ್ರೋಲ್ ಬಂಕ್‌ಗಳನ್ನು ಬಳಸಿಕೊಂಡು ಹಣ ಪಡೆಯುವ ಮಾರ್ಗವನ್ನು ಅವರು ಅನುಸರಿಸುತ್ತಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳಿಂದ ಪೆಟ್ರೋಲ್ ಬಂಕ್‌ನ QR ಕೋಡ್ ಸ್ಕ್ಯಾನ್ ಮಾಡಿಸಿ, ಹಣವನ್ನು ಬಂಕ್ ಸಿಬ್ಬಂದಿಯ ಖಾತೆಗೆ ಪಾವತಿಸುವಂತೆ ಮಾಡುತ್ತಿದ್ದರು. ಬಳಿಕ ಬಂಕ್ ಸಿಬ್ಬಂದಿಯಿಂದ ಅದೇ ಮೊತ್ತವನ್ನು ನಗದು ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ನೇರವಾಗಿ ತಮ್ಮ ಖಾತೆಗೆ ಹಣ ವರ್ಗಾವಣೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದರು ಎನ್ನಲಾಗಿದೆ.
ರಾತ್ರಿ ವೇಳೆ ವಾಕಿಂಗ್‌ಗೆ ತೆರಳುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ಈ ಗ್ಯಾಂಗ್ ಗುರಿಯಾಗಿಸಿಕೊಳ್ಳುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಜೋಡಿಗಳ ಫೋಟೋ ಅಥವಾ ವಿಡಿಯೋಗಳನ್ನು ಸೆರೆಹಿಡಿದು, ಬಳಿಕ ಅದನ್ನೇ ಬಳಸಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಅಥವಾ ವಿಡಿಯೋ ವೈರಲ್ ಆಗುವ ಭಯದಿಂದ ಆರೋಪಿಗಳು ಕೇಳಿದ ಹಣ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಪ್ರಕರಣಗಳ ಕುರಿತು ಸಂತ್ರಸ್ತರಿಂದ ದೂರುಗಳು ಬಂದ ಹಿನ್ನೆಲೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ಇತರ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬಂಧಿತರ ವಿಚಾರಣೆ ವೇಳೆ ಇನ್ನಷ್ಟು ಸಂತ್ರಸ್ತರು ಹಾಗೂ ಘಟನೆಗಳ ಬಗ್ಗೆ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ. ಗ್ಯಾಂಗ್ ಇದೇ ರೀತಿಯಲ್ಲಿ ಇನ್ನೆಷ್ಟು ಮಂದಿಯನ್ನು ಗುರಿಯಾಗಿಸಿತ್ತು, ಎಷ್ಟು ಹಣ ವಸೂಲಿ ಮಾಡಿತ್ತು ಮತ್ತು ಫೋಟೋ-ವಿಡಿಯೋಗಳನ್ನು ಎಲ್ಲಿ ಸಂಗ್ರಹಿಸಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತರ ದೂರಿನ ಆಧಾರದ ಮೇಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
