ವಾರಣಾಸಿಯಲ್ಲಿ ಪೊಲೀಸ್ ಎನ್‌ಕೌಂಟರ್‌‌ಗೆ ಕುಖ್ಯಾತ ನಕ್ಸಲ್ ಕಮಾಂಡರ್ ಬಲಿ

Untitled design 2026 09 20T164821.320

ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭದ್ರತಾ ಸಂಸ್ಥೆಗಳಿಗೆ ದೀರ್ಘಕಾಲದಿಂದ ಬೇಕಾಗಿದ್ದ ನಿಷೇಧಿತ ನಕ್ಸಲ್ ಸಂಘಟನೆಯ ಕಮಾಂಡರ್ ಬ್ರಿಜೇಶ್ ಗಂಜು ಅಲಿಯಾಸ್ ಗೋಪಾಲ್ ಸಿಂಗ್, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (UP ATS) ನಡೆಸಿದ ಎನ್ಕೌಂಟರ್‌‌ನಲ್ಲಿ ಹತ್ಯೆಗೀಡಾಗಿದ್ದಾನೆ. 

ಕೊಲ್ಲಲ್ಪಟ್ಟ ಗೋಪಾಲ್ ಸಿಂಗ್, ಜಾರ್ಖಂಡ್ ಮೂಲದ ನಿಷೇಧಿತ ನಕ್ಸಲ್ ಸಂಘಟನೆಯಾದ ತೃತೀಯಾ ಪ್ರಸ್ತುತಿ ಸಮಿತಿ (ಟಿಪಿಸಿ)ಯ ಪ್ರಮುಖ ಕಮಾಂಡರ್ ಆಗಿದ್ದನು. ಈತ ಹಲವಾರು ವರ್ಷಗಳಿಂದ ಭದ್ರತಾ ಸಂಸ್ಥೆಗಳ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಿರುವ ತಾಂಡ್ವಾ ಭಯೋತ್ಪಾದನೆಗೆ ಹಣಕಾಸು ನೆರವು (ಟೆರರ್ ಫಂಡಿಂಗ್) ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ.

30 ಲಕ್ಷ ರೂ. ಬಹುಮಾನ ಘೋಷಣೆ

ನಕ್ಸಲ್ ಕಮಾಂಡರ್ ಬ್ರಿಜೇಶ್ ಗಂಜುವಿನ ಮಾಹಿತಿ ನೀಡಿದವರಿಗೆ 30 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಇದರಲ್ಲಿ ಜಾರ್ಖಂಡ್ ಸರ್ಕಾರವು 25 ಲಕ್ಷ ರೂ. ಮತ್ತು NIA ಹೆಚ್ಚುವರಿಯಾಗಿ 5 ಲಕ್ಷ ರೂ. ಬಹುಮಾನವನ್ನು ನಿಗದಿಪಡಿಸಿದ್ದವು. 

ವಾರಣಾಸಿಯಲ್ಲಿ ಮುಂಜಾನೆ ಎನ್ಕೌಂಟರ್

ಸಿಬ್ಬಂದಿಗೆ ವಾರಣಾಸಿಯ ನಿರ್ದಿಷ್ಟ ಪ್ರದೇಶದಲ್ಲಿ ನಕ್ಸಲ್ ಕಮಾಂಡರ್ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಯುಪಿ ಎಟಿಎಸ್ ಮತ್ತು ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆ ಕೈಗೊಂಡು ಆರೋಪಿಯ ಎನ್ಕೌಂಟರ್ ಮಾಡಲಾಗಿದೆ. ಮುಂಜಾನೆಯ ವೇಳೆ ನಡೆದ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಸುತ್ತುವರಿದು ಎಚ್ಚರಿಕೆ ನೀಡಿದರೂ, ಆರೋಪಿ ಗುಂಡು ಹಾರಿಸಿ ಪ್ರತಿರೋಧ ಒಡ್ಡಿದಾಗ ಪ್ರತಿದಾಳಿ ನಡೆಸಿ ಹತ್ಯೆಗೀಡು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಸಂಸ್ಥೆಗಳಿಗೆ ದೊಡ್ಡ ಯಶಸ್ಸು

ಈ ಎನ್ಕೌಂಟರ್ ಅನ್ನು ಭದ್ರತಾ ಸಂಸ್ಥೆಗಳಿಗೆ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ. ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ನಕ್ಸಲ್ ಕಮಾಂಡರ್ ಹತ್ಯೆಯಿಂದ ನಕ್ಸಲ್ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ. NIA ತನಿಖೆ ನಡೆಸುತ್ತಿದ್ದ ಟೆರರ್ ಫಂಡಿಂಗ್ ಪ್ರಕರಣದಲ್ಲಿ ಈತನ ಹತ್ಯೆ ಪ್ರಮುಖ ತಿರುವು ನೀಡುವ ನಿರೀಕ್ಷೆಯಿದೆ.

ಈ ಕಾರ್ಯಾಚರಣೆಯಲ್ಲಿ ಯುಪಿ ಎಟಿಎಸ್ ಮತ್ತು ಎಸ್ಟಿಎಫ್ ಪಡೆಗಳ ಸಮನ್ವಯತೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇತರ ನಕ್ಸಲ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version