“ನನ್ ಕಡೆಯಿಂದ ತಪ್ಪಾದರೆ ಕ್ಷಮಿಸಿ”: ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಕ್ಷಮೆ ಕೇಳಿದ ಗಿಲ್ಲಿ

Untitled design 2026 02 04T214837.147

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ ಗಿಲ್ಲಿ ನಟ ಅಲಿಯಾಸ್ ನಟರಾಜ್, 46 ಕೋಟಿ ಮತಗಳನ್ನು ಪಡೆದು ಅಪಾರ ಜನಪ್ರಿಯತೆ ಗಳಿಸಿದ್ದರು. ಹಳ್ಳಿ ಹುಡುಗನ ಸರಳತೆ, ಸಹಜ ನಗು, ಕಾಮಿಡಿ ಟೈಮಿಂಗ್ ಮತ್ತು ನೈಜ ವ್ಯಕ್ತಿತ್ವದ ಮೂಲಕ ನಾಡಿನ ಜನತೆಯ ಹೃದಯ ಗೆದ್ದ ಗಿಲ್ಲಿ, ಬಿಗ್ ಬಾಸ್ ಮನೆಯಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಗಿಲ್ಲಿ ಮೇಲಿನ ಅಭಿಮಾನ ಇಷ್ಟು ಗಟ್ಟಿಯಾಗಿತ್ತು ಎಂಬುದಕ್ಕೆ ಸಾಕ್ಷಿ ಎಂದರೆ, ಅನೇಕ ಅಭಿಮಾನಿಗಳು ಅವರ ಟ್ಯಾಟೂವನ್ನು ತಮ್ಮ ದೇಹದ ಮೇಲೆ ಹಾಕಿಸಿಕೊಂಡಿದ್ದರು.

ಆದರೆ, ಈ ಅಪಾರ ಪ್ರೀತಿ ಇತ್ತೀಚೆಗೆ ವಿವಾದದ ರೂಪ ತಾಳಿದೆ. ಮಂಡ್ಯ ಮೂಲದ ಬೆಂಗಳೂರು ನಿವಾಸಿ ಕುಮಾರ್ ಎಂಬ ಅಭಿಮಾನಿ, ಗಿಲ್ಲಿ ನಟನ ಮೊದಲ ಟ್ಯಾಟೂವನ್ನು ಹಾಕಿಸಿಕೊಂಡ ವ್ಯಕ್ತಿ ಎನ್ನಲಾಗುತ್ತಿದೆ. ಬಿಗ್ ಬಾಸ್ ಶೋ ನಡೆಯುವ ಸಮಯದಲ್ಲಿ ಗಿಲ್ಲಿಯ ಮೇಲಿನ ಅಭಿಮಾನದಿಂದ ಟ್ಯಾಟೂ ಹಾಕಿಸಿಕೊಂಡಿದ್ದ ಕುಮಾರ್ ಅವರನ್ನು ಬಿಗ್ ಬಾಸ್ ತಂಡವೇ ಫ್ಯಾನ್ಸ್ ಶೋ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಆ ವೇಳೆ ಗಿಲ್ಲಿ ನಟ ನೇರವಾಗಿ ಮಾತನಾಡಿ, “ಶೋ ಮುಗಿದ ನಂತರ ಖಂಡಿತವಾಗಿ ಭೇಟಿ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರಂತೆ.

ಆದರೆ, ಶೋ ಮುಗಿದು ಗಿಲ್ಲಿ ನಟ  ವಿಜೇತರಾದ ನಂತರ ಪರಿಸ್ಥಿತಿ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ. 50 ಲಕ್ಷ ರೂ. ನಗದು ಬಹುಮಾನ, 20 ಲಕ್ಷ ರೂ. ಮೌಲ್ಯದ ಕಾರು, ಜೊತೆಗೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ನೀಡಿದ 10 ಲಕ್ಷ ರೂ. ಸೇರಿ ಒಟ್ಟು 80 ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ಪಡೆದ ಬಳಿಕ ಗಿಲ್ಲಿ ನಟ ಅಭಿಮಾನಿಗಳನ್ನು ಭೇಟಿ ಮಾಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿದ ಕುಮಾರ್, “ನಾನು ಎಲ್ಲಿಯೂ ಮುಖ ತೋರಿಸಲು ಆಗುತ್ತಿಲ್ಲ. ನನ್ನ ಹೆಂಡತಿ ಮಕ್ಕಳು ಕೂಡ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಗಿಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರೂ ಇವರೆಗೆ ಅವರು ನನ್ನನ್ನು ಭೇಟಿ ಮಾಡಿಲ್ಲ. ಶಾಪಿಂಗ್ ಮಾಲ್‌ಗಳಿಗೆ, ಸಿನಿಮಾ ಕಾರ್ಯಕ್ರಮಗಳಿಗೆ ಹೋಗುವ ಗಿಲ್ಲಿ, ಅಭಿಮಾನಿಗಳಿಗೆ ಸಮಯ ಕೊಡುತ್ತಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

ಇಷ್ಟೇ ಅಲ್ಲದೆ, ಗಿಲ್ಲಿ ಗೆಲುವಿಗಾಗಿ ಪೋಸ್ಟರ್ ಹಾಕಿ, ವಿಡಿಯೋ ಮಾಡಿ, ಪ್ರಚಾರ ಮಾಡಿದ ಆಟೋ ಚಾಲಕರು, ಪೊಲೀಸ್ ಸಿಬ್ಬಂದಿ, ವಕೀಲರು, ಕ್ಯಾಬ್ ಡ್ರೈವರ್‌ಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಕೂಡ ಅವರು ಭೇಟಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. “ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್ ಅವರಂತಹ ಮಹಾನ್ ಕಲಾವಿದರು ಅಭಿಮಾನಿಗಳಿಗೆ ಕೊಟ್ಟ ಗೌರವವೇ ಅವರನ್ನು ಎತ್ತರಕ್ಕೆ ಕೊಂಡೊಯ್ದಿತು. ಆದರೆ ಗಿಲ್ಲಿ ಅಭಿಮಾನಿಗಳಿಂದಲೇ ಗೆದ್ದರೂ ಅವರನ್ನು ಮರೆತಿದ್ದಾರೆ” ಎಂದು ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿವಾದ ಗಂಭೀರ ರೂಪ ತಾಳುತ್ತಿದ್ದಂತೆ, ಗಿಲ್ಲಿ ನಟ ಖಾಸಗಿ ವಾಹಿನಿಯೊಂದರ ಮುಂದೆ ಬಂದು ಸ್ಪಷ್ಟನೆ ನೀಡಿದರು. “ನಾನು ಎಲ್ಲ ಅಭಿಮಾನಿಗಳಿಗೂ ಸಿಗ್ತೀನಿ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಒಟ್ಟಿಗೆ ಭೇಟಿ ಮಾಡುವುದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಎಲ್ಲರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

Exit mobile version