“ಇದು ಕಪಲ್ ಶೋ ಅಲ್ಲ!”: ಗಿಲ್ಲಿ ಸ್ನೇಹದ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಸ್ಪಷ್ಟನೆ ಕೊಟ್ಟ ಕಾವ್ಯ ಶೈವ

Untitled design 2026 01 18T231623.773

‘ಬಿಗ್ ಬಾಸ್ ಕನ್ನಡ ಸೀಸನ್ 12’ ಗ್ರಾಂಡ್ ಫಿನಾಲೆ ಮುಕ್ತಾಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವ ವೇಳೆಯಲ್ಲಿ, ಸ್ಪರ್ಧಿಗಳಲ್ಲಿ ಒಬ್ಬರಾದ ಕಾವ್ಯ ಶೈವ (Kavya Shaiva) ಮೂರನೇ ರನ್ನರ್ ಅಪ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಆರಂಭದಿಂದಲೇ ತಮ್ಮದೇ ಆದ ನಿಲುವು, ಸ್ಪಷ್ಟ ಅಭಿಪ್ರಾಯ ಮತ್ತು ಆಟದಿಂದ ಗಮನ ಸೆಳೆದಿದ್ದ ಕಾವ್ಯ, ಫಿನಾಲೆ ವೇದಿಕೆಯಲ್ಲಿ ಕೊನೆಯ ಮಾತುಗಳನ್ನು ಆಡುತ್ತಾ ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಕಾವ್ಯ ಮತ್ತು ಗಿಲ್ಲಿ ನಡುವಿನ ಸ್ನೇಹ ಹಾಗೂ ಅವರಿಬ್ಬರ ಬಗ್ಗೆ ಹರಡಿದ್ದ ಹಲವು ರೀತಿಯ ಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಇದೇ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಮಾತನಾಡಿದ ಕಾವ್ಯ, ತಮ್ಮ ಬಗ್ಗೆ ಹರಡಿದ್ದ ಊಹಾಪೋಹಗಳಿಗೆ ನೇರವಾಗಿ ಉತ್ತರ ನೀಡಿದರು.

“ಗಿಲ್ಲಿ ನನ್ನ ಹೆಸರು ಹೇಳಿದಾಗ ಮಾತ್ರ ಕಾಣಿಸಿಕೊಳ್ಳೋಕೆ ಇದು ಕಪಲ್ ಶೋ ಅಲ್ಲ” ಎಂದು ಕಾವ್ಯ ಸ್ಪಷ್ಟವಾಗಿ ಹೇಳಿದರು. ತಾವು ಯಾವತ್ತೂ ಕ್ಯಾಮರಾ ಫೋಕಸ್ ಅಥವಾ ಪ್ರಚಾರಕ್ಕಾಗಿ ಮಾತನಾಡಿಲ್ಲ, ಪರಿಸ್ಥಿತಿ ಮತ್ತು ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದೇನೆ ಎಂದು ತಿಳಿಸಿದರು. “ಅಶ್ವಿನಿ ಮೇಡಂ ವಿಚಾರದಲ್ಲೂ ಕೂಡ ಅನಾವಶ್ಯಕವಾಗಿ ಜೋರಾಗಿ ಮಾತನಾಡಬೇಕೆನ್ನುವ ಅಗತ್ಯ ಇರಲಿಲ್ಲ. ಎಲ್ಲಿ ಜೋರಾಗಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ, ಎಲ್ಲಿ ಮೆಲ್ಲಗೆ ಹೇಳಬೇಕೋ ಅಲ್ಲಿ ಮೆಲ್ಲಗೆ ಹೇಳಿದ್ದೇನೆ” ಎಂದು ತಮ್ಮ ಆಟದ ತಂತ್ರವನ್ನು ವಿವರಿಸಿದರು.

ಬಿಗ್ ಬಾಸ್ ಮನೆ ಎಂದರೆ ಪ್ರತಿಕ್ಷಣವೂ ಗಮನ, ಟೀಕೆ ಮತ್ತು ವಿಶ್ಲೇಷಣೆ ಎದುರಿಸಬೇಕಾದ ವೇದಿಕೆ. ಈ ನಡುವೆ ಕಾವ್ಯ ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಂಡು, ಗೊಂದಲಗಳಿಗೆ ಸಿಲುಕದೇ ಸಾಗಲು ಪ್ರಯತ್ನಿಸಿದ್ದೇನೆ ಎಂದರು. “ಎಲ್ಲಾ ವಿಚಾರದಲ್ಲೂ ಕೂಗಿ ಮಾತನಾಡಬೇಕು ಅನ್ನೋ ನಿಯಮ ಇಲ್ಲ. ಮಾತಿಗಿಂತ ವರ್ತನೆ ಮುಖ್ಯ” ಎನ್ನುವ ಸಂದೇಶವನ್ನು ಕೂಡ ಅವರು ಈ ಮೂಲಕ ನೀಡಿದರು.

ಫಿನಾಲೆ ವೇದಿಕೆಯಲ್ಲಿ ಮಾತನಾಡುತ್ತಾ, ತಮ್ಮನ್ನು ಈ ಹಂತದವರೆಗೆ ತಲುಪಿಸಿದ ಅಭಿಮಾನಿಗಳಿಗೆ ಕಾವ್ಯ ಭಾವುಕರಾಗಿ ಧನ್ಯವಾದ ಸಲ್ಲಿಸಿದರು. “ನನ್ನನ್ನು ನಾಲ್ಕನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಎಲ್ಲಾ ಅಭಿಮಾನಿಗಳಿಗೆ ಕೋಟಿ ಕೋಟಿ ನಮನ” ಎಂದು ಹೇಳಿದರು..

ಬಹುಮಾನ ವಿಚಾರದಲ್ಲೂ ಕಾವ್ಯ ಶೈವಗೆ ಸಿಹಿ ಸುದ್ದಿ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಕಾವ್ಯಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ. ಇದಕ್ಕೂ ಮೊದಲು ನಾಲ್ಕನೇ ರನ್ನರ್ ಅಪ್ ಆಗಿ ಹೊರಬಂದ ರಘುಗೆ ಇಬ್ಬರು ಪ್ರಾಯೋಜಕರಿಂದ ಒಟ್ಟು 3.50 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಹೀಗಾಗಿ ಬಹುಮಾನ ಮೊತ್ತದ ವಿಚಾರದಲ್ಲಿ ಕಾವ್ಯಗೆ ಹೆಚ್ಚು ಲಾಭವಾಗಿದೆ ಎನ್ನಬಹುದು.

Exit mobile version