ಬಿಗ್ ಬಾಸ್‌ಗೆ ಸ್ಥಗಿತ: 10 ದಿನಗಳ ಕಾಲಾವಕಾಶ, ಶೋ ಪುನಾರಂಭ ಸಾಧ್ಯತೆ

Untitled design 2025 10 08t125001.001

ಕನ್ನಡ ಟೆಲಿವಿಷನ್‌ನ ಜನಪ್ರಿಯ ರಿಯಾಲಿಟಿ ಶೋ “ಬಿಗ್ ಬಾಸ್” ಕಾರ್ಯಕ್ರಮಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನಿಯಮ ಉಲ್ಲಂಘನೆ ಮತ್ತು ಪೊಲೀಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿತ್ತು. ಈಗ, ಜಿಲ್ಲಾಡಳಿತವು ವೆಲ್ಸ್ ಸ್ಟುಡಿಯೋಸ್‌ಗೆ 10 ದಿನಗಳ ಕಾಲಾವಕಾಶ ನೀಡಿದ್ದು, ಶೋ ಪುನಾರಂಭವಾಗುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ವೆಲ್ಸ್ ಸ್ಟುಡಿಯೋಸ್ ಜಿಲ್ಲಾಧಿಕಾರಿಗೆ 15 ದಿನಗಳ ಕಾಲಾವಕಾಶ ನೀಡುವಂತೆ ಪತ್ರ ಬರೆದು ಮನವಿ ಸಲ್ಲಿಸಿತ್ತು. ಆದರೆ, ಜಿಲ್ಲಾಡಳಿತವು 10 ದಿನಗಳ ಕಾಲಾವಕಾಶವನ್ನು ನೀಡಿದ್ದು, ಈ ಅವಧಿಯಲ್ಲಿ ಎಲ್ಲಾ ನಿಯಮ ಉಲ್ಲಂಘನೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ. ವೆಲ್ಸ್ ಸ್ಟುಡಿಯೋಸ್ ತಾವು ಎಲ್ಲಾ ಕಾನೂನುಬದ್ಧ ಅಗತ್ಯತೆಗಳನ್ನು ಪೂರೈಸುವುದಾಗಿ ಜಿಲ್ಲಾಧಿಕಾರಿಗೆ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ತಾತ್ಕಾಲಿಕ ರಿಲೀಫ್ ನೀಡಿದೆ.

ನಿನ್ನೆಯವರೆಗೂ ಬಿಗ್ ಬಾಸ್ ಶೋಗೆ ಸಂಬಂಧಿಸಿದಂತೆ ಜಾಲಿವುಡ್ ಸ್ಟುಡಿಯೋದಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಸ್ಪರ್ಧಿಗಳನ್ನು ಬಿಡದಿಯ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಈಗ ಜಿಲ್ಲಾಡಳಿತದಿಂದ ಸಿಕ್ಕಿರುವ 10 ದಿನಗಳ ರಿಲೀಫ್‌ನಿಂದಾಗಿ, ಮಧ್ಯಾಹ್ನ 2:00 ಗಂಟೆಯೊಳಗೆ ಶೋಗೆ ಸಂಬಂಧಿಸಿದ ಚಟುವಟಿಕೆಗಳು ಪುನಾರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಅವಕಾಶವನ್ನು ಬಳಸಿಕೊಂಡು ವೆಲ್ಸ್ ಸ್ಟುಡಿಯೋಸ್ ತಮ್ಮ ಕಾನೂನುಬದ್ಧ ಜವಾಬ್ದಾರಿಗಳನ್ನು ಈಡೇರಿಸಿದರೆ, ಕನ್ನಡ ಬಿಗ್ ಬಾಸ್ ಶೀಘ್ರದಲ್ಲೇ ತನ್ನ ಜನಪ್ರಿಯ ರಿಯಾಲಿಟಿ ಶೋನ ಚಿತ್ರೀಕರಣವನ್ನು ಮತ್ತೆ ಆರಂಭಿಸಲಿದೆ.

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಭಾರೀ ಜನಮನ್ನಣೆ ಇದ್ದು, ಇದರ ಅಭಿಮಾನಿಗಳು ಶೋ ಸ್ಥಗಿತಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ವೆಲ್ಸ್ ಸ್ಟುಡಿಯೋಸ್‌ಗೆ ಈ 10 ದಿನಗಳ ಅವಧಿಯಲ್ಲಿ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸವಾಲು ಎದುರಾಗಿದೆ.

Exit mobile version