ಬಿಗ್‌ಬಾಸ್‌ ಗಿಲ್ಲಿ ನಟನ ಬಗ್ಗೆ ಮೋದಿ, ರಜನಿಕಾಂತ್ ಮಾತು..! ವೈರಲ್ ಪೋಸ್ಟ್‌ಗಳ ಅಸಲಿ ಸತ್ಯ ಇಲ್ಲಿದೆ

Untitled design 2026 01 17T130946.375

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಗ್ರ್ಯಾಂಡ್‌ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಪ್ರೇಕ್ಷಕರಲ್ಲಿ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಮನೆ ಮಾಡಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಪೋಸ್ಟ್‌ಗಳು ವಿಪರೀತ ವೈರಲ್ ಆಗುತ್ತಿವೆ. ಒಂದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದಾರೆ ಎಂಬುದು. ನನ್ನ ಪತ್ನಿ ಬಿಗ್ ಬಾಸ್ ಕನ್ನಡ ಸೀಸನ್ 12 ನೋಡುತ್ತಾರೆ, ಅವರಿಗೆ ಗಿಲ್ಲಿ ನಟ ಅಂದರೆ ಇಷ್ಟ ಎಂದು ರಜನಿಕಾಂತ್ ಹೇಳಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿತ್ತು. ಆದರೆ ಇದು ಸಂಪೂರ್ಣ ಸುಳ್ಳು. ಯಾವುದೋ ಟ್ರೋಲ್ ಪೇಜ್ ಸೃಷ್ಟಿಸಿದ ಈ ಪೋಸ್ಟ್ ಅಭಿಮಾನಿಗಳನ್ನು ದಾರಿ ತಪ್ಪಿಸುತ್ತಿದೆ.

ಅಷ್ಟೇ ಅಲ್ಲದೆ, ಈಗ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಗಿಲ್ಲಿ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಮತ್ತೊಂದು ಪೋಸ್ಟ್ ಹರಿದಾಡುತ್ತಿದೆ. ಇದಂತೂ ಕಲ್ಪನೆಗೂ ಮೀರಿದ ಸುಳ್ಳು ಸುದ್ದಿಯಾಗಿದೆ.

ಅಭಿಮಾನಿಯ ಟ್ಯಾಟೂ ಪ್ರೇಮ

ಗಿಲ್ಲಿ ನಟ ದೊಡ್ಡಮನೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವುದು ಸುಳ್ಳಲ್ಲ. ಇತ್ತೀಚೆಗೆ ಅವರ ಅಭಿಮಾನಿಯೊಬ್ಬರು ಗಿಲ್ಲಿ ನಟನ ಮುಖವನ್ನು ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯೊಳಗೆ ಈ ವಿಷಯ ತಿಳಿದಾಗ ಗಿಲ್ಲಿ ತುಂಬಾನೇ ಭಾವುಕರಾಗಿದ್ದರು. ನಾನು ಹೊರಗೆ ಬಂದ ಮೇಲೆ ಖಂಡಿತವಾಗಿ ಆ ಅಭಿಮಾನಿಯನ್ನು ಭೇಟಿ ಮಾಡುತ್ತೇನೆ ಎಂದು ಗಿಲ್ಲಿ ನಟ ಹೇಳಿದ್ದರು.

ಗಿಲ್ಲಿ ನಟ ಈ ಸೀಸನ್‌ನ ಎಂಟರ್‌ಟೈನರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮತ್ತು ರಕ್ಷಿತಾ ಶೆಟ್ಟಿ ಅವರ ಜೊತೆ ಆಡಿದ ಜಗಳಗಳು ಕೂಡ ಅಷ್ಟೇ ಹೈಲೈಟ್ ಆಗಿವೆ. ಗಿಲ್ಲಿಯ ಕಾಮಿಡಿ ಕೆಲವೊಮ್ಮೆ ಇತರರ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂದು ಸ್ಪರ್ಧಿಗಳು ಆರೋಪಿಸಿದ್ದರು. ಸೂರಜ್ ಸಿಂಗ್ ಮತ್ತು ರಜತ್ ಕೂಡ ಗಿಲ್ಲಿ ನಟನ ಜೊತೆ 24 ಗಂಟೆ ಇರುವುದು ಕಷ್ಟ ಎಂದು ತಮಾಷೆಯಾಗಿ ಹೇಳಿದ್ದುಂಟು.

ಒಟ್ಟಾರೆಯಾಗಿ, ಸುಳ್ಳು ಸುದ್ದಿಗಳ ನಡುವೆಯೂ ಗಿಲ್ಲಿ ನಟ ಈ ಬಾರಿಯ ಫಿನಾಲೆಯಲ್ಲಿ ಪ್ರಬಲ ಸ್ಪರ್ಧಿಯಾಗಿ  ಹೊರಹೊಮ್ಮಿದ್ದಾರೆ. ನಾಳೆಯ ಫಿನಾಲೆಯಲ್ಲಿ ಅವರು ಟ್ರೋಫಿ ಗೆಲ್ಲುತ್ತಾರಾ ಎಂದು ಕಾದು ನೋಡಬೇಕು.

Exit mobile version