ಬಿಗ್‌ಬಾಸ್ ಕನ್ನಡ ಸೀಸನ್ 12 (BBK 12) ತನ್ನ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಅಭಿಮಾನಿಗಳ ಕುತೂಹಲ ತಾರಕಕ್ಕೇರಿದೆ. ಇದೇ ಸಮಯದಲ್ಲಿ ಈ ಸೀಸನ್‌ನ ಮಾಜಿ ಸ್ಪರ್ಧಿ ಜಾನ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಸ್ಟೋರಿ ಭಾರೀ ಚರ್ಚೆಗೆ ಕಾರಣವಾಗಿದೆ. ಫೈನಲ್‌ಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಜಾನ್ವಿ ಅವರ ಈ ಪೋಸ್ಟ್ ಬಿಗ್‌ಬಾಸ್ ವೀಕ್ಷಕರಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಜಾನ್ವಿ ಅವರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹಲವು ವಾರಗಳು ಕಳೆದಿವೆ. ಶೋನಿಂದ ಹೊರಬಂದ ಬಳಿಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ವೀಡಿಯೋಗಳು, ಫೋಟೋ ಶೂಟ್‌ಗಳು ಮತ್ತು ರೀಲ್ಸ್ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಅವರು ಹಂಚಿಕೊಂಡಿರುವ ಸ್ಟೋರಿ ಮಾತ್ರ ಚರ್ಚೆಗೆ ಕಾರಣವಾಗಿದೆ.
ಜಾನ್ವಿ ತಮ್ಮ ಸ್ಟೋರಿಯಲ್ಲಿ, “ಯಾವೊಬ್ಬ ಸ್ಪರ್ಧಿಗೆ ಅತಿಯಾದ ಹೈಪ್ ನೀಡುವುದು ಸರಿ ಎನಿಸುತ್ತಿಲ್ಲ” ಎಂಬ ಅರ್ಥ ಬರುವಂತೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಜೊತೆಗೆ, ಅಶ್ವಿನಿ ಕುರಿತು “ದುಡ್ಡು ಕೊಟ್ಟು ವೋಟ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸುವವರು, ಚುನಾವಣೆ ಸಮಯದಲ್ಲೂ ಇದೇ ಪ್ರಶ್ನೆ ಕೇಳಲಿ” ಎಂಬ ವ್ಯಂಗ್ಯಮಿಶ್ರಿತ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಭುಗಿಲೆದ್ದಿವೆ. ಕೆಲವರು “ಯಾವ ಸ್ಪರ್ಧಿಗೆ ಹೈಪ್ ಕೊಡುವುದು ಜನರ ಆಯ್ಕೆ, ಇದರಲ್ಲಿ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು “ಇಷ್ಟು ಬುದ್ದಿವಂತಿಕೆ ಮಾತಾಡುವವರು ಮತ್ತೆ ಬಿಗ್‌ಬಾಸ್ ಮನೆಗೆ ಯಾಕೆ ಹೋಗಿದ್ದರು?” ಎಂದು ಜಾನ್ವಿ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಇದು ಮೊದಲ ಬಾರಿಗೆ ಅಲ್ಲ. ಜಾನ್ವಿ ಅವರು ಬಿಗ್‌ಬಾಸ್ ಮನೆಯೊಳಗಿದ್ದಾಗಲೇ, ಕೆಲ ಸ್ಪರ್ಧಿಗಳನ್ನು ಚಾನೆಲ್ ಉದ್ದೇಶಪೂರ್ವಕವಾಗಿ ಉಳಿಸಿಕೊಳ್ಳುತ್ತಿದೆ ಎಂದು ನೇರವಾಗಿ ಆರೋಪಿಸಿದ್ದರು. ವಿಶೇಷವಾಗಿ ಕಲರ್ಸ್ ಕನ್ನಡ ತಂಡ ಸ್ಪಂದನಾ ಅವರನ್ನು ಬೆಂಬಲಿಸುತ್ತಿದೆ ಎಂಬ ಆರೋಪವನ್ನು ಅವರು ಬಹಿರಂಗವಾಗಿ ಮಾಡಿದ್ದರು. ಈ ವಿಚಾರ ಬಿಗ್‌ಬಾಸ್ ವೇದಿಕೆಯಲ್ಲೇ ಚರ್ಚೆಗೆ ಬಂದಿದ್ದು, ನಿರೂಪಕ ಕಿಚ್ಚ ಸುದೀಪ್ ಕೂಡ ಈ ವಿಷಯವನ್ನು ಪ್ರಶ್ನಿಸಿದ್ದರು. ಆ ಸಂದರ್ಭದಲ್ಲೇ ಜಾನ್ವಿ ಅವರ ನಿಲುವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇದೀಗ ಫಿನಾಲೆ ದಿನವೇ ಮತ್ತೆ ಜಾನ್ವಿ ಅವರ ಪೋಸ್ಟ್ ಚರ್ಚೆಗೆ ಬಂದಿರುವುದು, BBK 12ರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಫೈನಲ್‌ನಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದಕ್ಕಿಂತಲೂ, ವೋಟ್ ವ್ಯವಸ್ಥೆ ಮತ್ತು ಹೈಪ್ ರಾಜಕಾರಣವೇ ಪ್ರಮುಖ ಚರ್ಚಾ ವಿಷಯವಾಗುತ್ತಿದೆ.
ಇನ್ನೊಂದೆಡೆ, ಬಿಗ್‌ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆ ಹಿನ್ನೆಲೆಯಲ್ಲಿ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಿಗ್‌ಬಾಸ್ ಮನೆಯ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಬಿಡದಿ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.
