ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರ ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆಯ ವಾರ್ಷಿಕ ‘ಐದನಿ ಚಿನ್ನದ ಪದಕ’ ಪ್ರಶಸ್ತಿಗೆ ಈ ಬಾರಿ ಐಹಾಸಿಕ ತಜ್ಞ ಡಾ. ರವಿ ಕೋರಿಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಸ್ಥೆಯ ಈ ಗೌರವಕ್ಕೆ ಮೊದಲು ಡಾ. ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಭಾಜನರಾಗಿದ್ದರು. ಜೀವಮಾನ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಂಸಲೇಖ ಅವರು, ನವೆಂಬರ್ 14ರಂದು ಬಳ್ಳಾರಿಯ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯದ ಎದುರು ಡಾ. ಕೋರಿಶೆಟ್ಟರ್ ಅವರಿಗೆ ಈ ಪದಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲಿ, ರಾಜ್ಯ ಸರ್ಕಾರದ ವತಿಯಿಂದ ಡಾ. ಕೋರಿಶೆಟ್ಟರ್ ಅವರಿಗೆ ಸಿಗಬೇಕಾದ ಗೌರವಗಳು ಇನ್ನೂ ಸಿಕ್ಕಿಲ್ಲ . ಪದ್ಮಶ್ರೀ ಪ್ರಶಸ್ತಿಗೆ ಅರ್ಹರಾದ ಕೋರಿಶೆಟ್ಟರ್ ಅವರಿಗೆ ಇನ್ನೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ವಿಷಾದನೀಯ. ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
