ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (CBI) ನಡೆಸಿದ ದಾಳಿಯಲ್ಲಿ ಒಬ್ಬ ಪ್ರಮುಖ ಶಂಕಿತನನ್ನು ಬಂಧಿಸಲಾಗಿದೆ.
ರಾಜಸ್ಥಾನ ಮತ್ತು ಬಿಹಾರದಲ್ಲಿ ಈಗಾಗಲೇ ನಡೆದ ಬಂಧನಗಳ ಬೆನ್ನಲ್ಲೇ ನಾಸಿಕ್‌ನಲ್ಲಿ ಹೊಸ ಕೊಂಡಿ ಪತ್ತೆಯಾಗಿರುವುದು ತನಿಖೆಗೆ ಹೊಸ ದಿಕ್ಕು ನೀಡಿದೆ. ಸಿಬಿಐ ಅಧಿಕಾರಿಗಳ ಪ್ರಕಾರ, ಬಂಧಿತ ವ್ಯಕ್ತಿ ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವ ಮತ್ತು ಹಣ ವ್ಯವಹಾರ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ಶಿಕ್ಷಣ ಮಾಫಿಯಾ ಶಂಕೆ :
ನಾಸಿಕ್‌ನಲ್ಲಿ ವಶಕ್ಕೆ ಪಡೆಯಲಾದ ಶಂಕಿತನನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈತನ ಹಿಂದೆ ದೊಡ್ಡ ಮಟ್ಟದ ಶಿಕ್ಷಣ ಮಾಫಿಯಾ ಇರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಅವನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡ ಸಿಬಿಐ, ವಾಟ್ಸಾಪ್ ಸಂದೇಶಗಳು, ಕರೆಗಳು ಮತ್ತು ಇತರ ಡಿಜಿಟಲ್ ದತ್ತಾಂಶಗಳನ್ನು ಪರಿಶೀಲಿಸುತ್ತಿದೆ.
ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೇವಲ ಒಂದು ಅಥವಾ ಎರಡು ರಾಜ್ಯಗಳಿಗೆ ಸೀಮಿತವಾಗದೆ, ನಾಸಿಕ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಹಂಚಿಕೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಇನ್ನಷ್ಟು ದೊಡ್ಡ ವ್ಯಕ್ತಿಗಳು ಸಿಬಿಐ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ.
ಪ್ರಕರಣದ ತೀವ್ರತೆಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಈಗಾಗಲೇ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗಿರುವುದರಿಂದ ತನಿಖೆಯನ್ನು ತೀವ್ರಗೊಳಿಸುವಂತೆ CBIಗೆ ಸೂಚಿಸಲಾಗಿದೆ.
