ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಸಿನಿಮಾದ ಆನ್‌ಲೈನ್ ಟಿಕೆಟ್ ಬುಕಿಂಗ್ ಇಂದಿನಿಂದ ದೇಶಾದ್ಯಂತ ಆರಂಭವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಶೋಗಳ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ.
‘ಟಾಕ್ಸಿಕ್’ ಸಿನಿಮಾದ ಟಿಕೆಟ್‌ಗಳಿಗೆ ಅಭಿಮಾನಿಗಳಿಂದ ಭಾರೀ ಬೇಡಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ಸುಮಾರು 257 ಶೋಗಳ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿರುವ ಮಾಹಿತಿ ಲಭ್ಯವಾಗಿದೆ. ಬಿಡುಗಡೆಯ ದಿನದಂದು ಅಭಿಮಾನಿಗಳಿಗಾಗಿ ಹಲವು ಥಿಯೇಟರ್‌ಗಳಲ್ಲಿ ಮುಂಜಾನೆ ಶೋಗಳನ್ನು ಆಯೋಜಿಸಲಾಗಿದೆ. ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಲಿವೆ.
ಟಿಕೆಟ್ ದರದಲ್ಲಿಯೂ ಥಿಯೇಟರ್ ಮತ್ತು ಸ್ಕ್ರೀನ್‌ಗೆ ಅನುಗುಣವಾಗಿ ವ್ಯತ್ಯಾಸವಿದೆ. ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ಟಿಕೆಟ್ ದರ ಸುಮಾರು 400ರಿಂದ 500 ರೂಪಾಯಿವರೆಗೆ ನಿಗದಿಯಾಗಿದೆ. ಈ ಥಿಯೇಟರ್‌ನಲ್ಲಿ ಅಭಿಮಾನಿಗಳಿಗಾಗಿ ವಿಶೇಷವಾಗಿ 12 ಫ್ಯಾನ್ಸ್ ಶೋಗಳನ್ನು ಆಯೋಜಿಸಿರುವುದು ಗಮನ ಸೆಳೆದಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಕ್ರೀನ್ ಮತ್ತು ಸೌಲಭ್ಯಗಳಿಗೆ ಅನುಗುಣವಾಗಿ ಟಿಕೆಟ್ ದರ ನಿಗದಿಯಾಗಿದೆ. ಡಾಲ್ಬಿ ಅಟ್ಮಾಸ್, ಪಿಕ್ಸೆಲ್, ಗೋಲ್ಡ್ ಕ್ಲಾಸ್ ಹಾಗೂ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಪ್ರತ್ಯೇಕ ದರಗಳಿವೆ. ಡಾಲ್ಬಿ ಅಟ್ಮಾಸ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ದರ 420ರಿಂದ 1,200 ರೂಪಾಯಿವರೆಗೆ ಇದ್ದರೆ, ಪಿಕ್ಸೆಲ್ ಸ್ಕ್ರೀನ್‌ಗಳಲ್ಲಿ 560ರಿಂದ 1,100 ರೂಪಾಯಿವರೆಗೆ ಟಿಕೆಟ್ ಲಭ್ಯವಿದೆ.
ಇನ್ನು ಗೋಲ್ಡ್ ಕ್ಲಾಸ್ ಟಿಕೆಟ್‌ಗಳ ಬೆಲೆ 1,200ರಿಂದ 1,400 ರೂಪಾಯಿವರೆಗೆ ಇದೆ. ಯಲಹಂಕದ ಐನಾಕ್ಸ್‌ನಲ್ಲಿ ಟಿಕೆಟ್ ದರ 1,000ರಿಂದ 1,500 ರೂಪಾಯಿವರೆಗೆ ನಿಗದಿಯಾಗಿದೆ. ವೇಗಾ ಸಿಟಿ ಮಾಲ್‌ನಲ್ಲಿ 1,200ರಿಂದ 1,700 ರೂಪಾಯಿ ಹಾಗೂ ಒರಾಯನ್ ಮಾಲ್‌ನಲ್ಲಿ 1,000ರಿಂದ 1,400 ರೂಪಾಯಿವರೆಗೆ ಟಿಕೆಟ್ ದರ ಇದೆ.
‘ಟಾಕ್ಸಿಕ್’ ಸಿನಿಮಾದ ವಿಶೇಷತೆ ಎಂದರೆ ಯಶ್ ಅವರು ಸಿನಿಮಾದ ಕಥೆಯನ್ನು ಬರೆದು, ನಾಯಕನಾಗಿ ನಟಿಸುವುದರ ಜೊತೆಗೆ ಸಹ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಸಿನಿಪ್ರಿಯರು ಮತ್ತು ಯುವಜನರಲ್ಲಿ ಭಾರೀ ಕುತೂಹಲ ಮೂಡಿಸಿವೆ. ಭರ್ಜರಿ ಆ್ಯಕ್ಷನ್, ವಿಭಿನ್ನ ಮೇಕಿಂಗ್ ಹಾಗೂ ಹಾಲಿವುಡ್ ಮಾದರಿಯ ತಾಂತ್ರಿಕ ಗುಣಮಟ್ಟದೊಂದಿಗೆ ‘ಟಾಕ್ಸಿಕ್’ ಸಿದ್ಧವಾಗಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಬಹುನಿರೀಕ್ಷಿತ ಚಿತ್ರವು ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಆಗಸ್ಟ್ 26ರ ಬುಧವಾರ ‘ಟಾಕ್ಸಿಕ್’ ಸಿನಿಮಾ ಜಾಗತಿಕವಾಗಿ ತೆರೆಕಾಣಲಿದ್ದು, ಯಶ್ ಅಭಿಮಾನಿಗಳು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಜ್ಜಾಗಿದ್ದಾರೆ.
