NEET PG 2026 ಫಲಿತಾಂಶ ಪ್ರಕಟ

Untitled design (49)

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) NEET PG 2026 ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. 720ಕ್ಕೆ 641 ಅಂಕ ಗಳಿಸಿದ ಅಭ್ಯರ್ಥಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಫಲಿತಾಂಶದಲ್ಲಿ ಅಭ್ಯರ್ಥಿಗಳ ಅಂಕಗಳ ಜೊತೆಗೆ ಅವರ ಅಖಿಲ ಭಾರತ ರ‍್ಯಾಂಕ್ (AIR) ಅನ್ನೂ ಪ್ರಕಟಿಸಲಾಗಿದೆ.

ಈ ಬಾರಿ ಟಾಪ್-20 ರ‍್ಯಾಂಕ್ ಪಡೆದ ಅಭ್ಯರ್ಥಿಗಳು 614ರಿಂದ 641 ಅಂಕಗಳ ನಡುವೆ ಗಳಿಸಿದ್ದಾರೆ. 2ನೇ ರ‍್ಯಾಂಕ್ ಪಡೆದ ಅಭ್ಯರ್ಥಿ 633 ಅಂಕ ಗಳಿಸಿದ್ದರೆ, 3ನೇ ರ‍್ಯಾಂಕ್ ಪಡೆದ ಅಭ್ಯರ್ಥಿ 626 ಅಂಕ ಗಳಿಸಿದ್ದಾರೆ. ಹೀಗಾಗಿ ಅಗ್ರಸ್ಥಾನದಲ್ಲಿರುವ ಅಭ್ಯರ್ಥಿಗಳ ನಡುವೆ ಅಂಕಗಳ ವ್ಯತ್ಯಾಸವೂ ಗಮನ ಸೆಳೆದಿದೆ.

NEET PG 2026 ಪರೀಕ್ಷೆಯನ್ನು ಆಗಸ್ಟ್ 30ರಂದು ದೇಶಾದ್ಯಂತ ನಡೆಸಲಾಗಿತ್ತು. ಒಟ್ಟು 339 ನಗರಗಳ 1,111 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಪರೀಕ್ಷೆಗೆ 2,73,096 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ 2,65,980 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಇನ್ನು ಜೈಪುರದ ಅಭ್ಯರ್ಥಿಗಳಿಗೆ ಮಾತ್ರ ಪ್ರತ್ಯೇಕವಾಗಿ ಮರುಪರೀಕ್ಷೆ ನಡೆಸಲಾಗಿತ್ತು. ಜೈಪುರದ 2,416 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಮರುಪರೀಕ್ಷೆ ಆಯೋಜಿಸಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ.

NEET PG ದೇಶದ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ ಪದವೀಧರರಿಗೆ ವಿವಿಧ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ದೊರೆಯಲಿದೆ. MD ಮತ್ತು MS ಜೊತೆಗೆ DNB ಹಾಗೂ DrNB ಸೇರಿದಂತೆ ವಿವಿಧ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ NEET PG ಅಂಕಗಳು ಮತ್ತು ರ‍್ಯಾಂಕ್ ಪ್ರಮುಖವಾಗಿವೆ.

ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪರೀಕ್ಷೆ ಬರೆದಿದ್ದ ವೈದ್ಯಕೀಯ ಪದವೀಧರರ ಮುಂದಿನ ಹಂತದ ಪ್ರವೇಶ ಪ್ರಕ್ರಿಯೆಯತ್ತ ಗಮನ ನೆಟ್ಟಿದೆ. ಅಭ್ಯರ್ಥಿಗಳು ತಮ್ಮ ಅಂಕಗಳು ಮತ್ತು ಅಖಿಲ ಭಾರತ ರ‍್ಯಾಂಕ್ ಆಧರಿಸಿ ಮುಂದಿನ ಕೌನ್ಸೆಲಿಂಗ್ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

Exit mobile version