ರಾಜ್ಯದಲ್ಲಿ ಸಿಇಟಿ (CET) ಪರೀಕ್ಷೆಯ ಸಂದರ್ಭದಲ್ಲಿ ಜನಿವಾರ ತೆಗೆಸಿದ ಘಟನೆ ಮತ್ತೆ ಮರುಕಳಿಸಿದ್ದು, ಪೋಷಕರು ಮತ್ತು ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧಮ್ಕಿ:
ಏಪ್ರಿಲ್ 23 ರಂದು ನಡೆದ ಸಿಇಟಿ ಪರೀಕ್ಷೆಯ ಮೊದಲ ದಿನದಂದು, ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜನಿವಾರ ತೆಗೆಯಲು ನಿರಾಕರಿಸಿದ ಆನಂದ್ ಸುಧೀರ್ ರಾವ್ ಎಂಬ ವಿದ್ಯಾರ್ಥಿಗೆ, “ಜನಿವಾರ ತೆಗೆಯದಿದ್ದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲ, ಮನೆಗೆ ವಾಪಸ್ ಕಳುಹಿಸುತ್ತೇವೆ” ಎಂದು ಸಿಬ್ಬಂದಿ ಧಮ್ಕಿ ಹಾಕಿದ್ದಾರೆನ್ನಲಾಗಿದೆ. ಅನಿವಾರ್ಯವಾಗಿ ಮಗನ ಭವಿಷ್ಯಕ್ಕಾಗಿ ಪೋಷಕರು ಜನಿವಾರ ತೆಗೆಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಡಿವಾಳ ಪೊಲೀಸ್ ಠಾಣೆಗೆ ದೂರು:
ಈ ಘಟನೆಯಿಂದ ನೊಂದ ವಿದ್ಯಾರ್ಥಿ ಅನಿವೃದ್ಧ ರಾವ್ ಅವರ ತಂದೆ ರಘು ಅವರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನ ಮಗನಿಗೆ ಮಾತ್ರವಲ್ಲದೆ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಈ ರೀತಿ ಮಾಡಲಾಗಿದೆ. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ನಡೆಗೆ ಆಕ್ರೋಶ:
ವಿಷಯ ತಿಳಿಯುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಮತ್ತು ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ, ಅಧಿಕಾರಿಗಳು ಘಟನೆಯನ್ನು ಮುಚ್ಚಿಹಾಕಲು ಪೋಷಕರಿಂದ ಬಲವಂತವಾಗಿ ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಧಾರ್ಮಿಕ ಸಂಪ್ರದಾಯದ ಭಾಗವಾದ ಜನಿವಾರವನ್ನು ಪರೀಕ್ಷೆಯ ನೆಪದಲ್ಲಿ ತೆಗೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
