ಮಂಗಳೂರು: ಧರ್ಮಸ್ಥಳದ ವಿರುದ್ಧ ಕೃತಕ ಬುದ್ಧಿಮತ್ತೆ (AI) ಬಳಸಿ, ಸುಳ್ಳು ವೀಡಿಯೊಗಳನ್ನು ಸೃಷ್ಟಿಸಿ, ಅಪಪ್ರಚಾರ ಮಾಡಿದ ಆರೋಪದಡಿ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ, ನಾಳೆ (ಆಗಸ್ಟ್ 24) ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿಯ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಸಮೀರ್‌ಗೆ ಮೂರನೇ ಬಾರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ, ಬಂಧನ ಭೀತಿಯಿಂದ ಸಮೀರ್ ಎಂ.ಡಿ. ನಾಪತ್ತೆಯಾಗಿದ್ದು, ಆತನ ಬಳ್ಳಾರಿಯ ಕೌಲಬಜಾರ್‌ನ ಬಂಡಿಹಟ್ಟಿಯ ಮನೆ ಹಾಗೂ ಬೆಂಗಳೂರಿನ ಜಿಗಣಿಯ ಹುಲ್ಲಹಳ್ಳಿಯ ಬಾಡಿಗೆ ಮನೆಯ ಗೋಡೆಗಳಿಗೆ ಪೊಲೀಸರು ನೋಟೀಸ್ ಅಂಟಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಕಲಂ 192, 240, ಮತ್ತು 353(1)(b) ಅಡಿಯಲ್ಲಿ ಗಲಭೆಗೆ ಪ್ರಚೋದನೆ, ಸುಳ್ಳು ಮಾಹಿತಿ ಹರಡುವಿಕೆ, ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಆರೋಪಗಳೊಂದಿಗೆ ಪ್ರಕರಣ ದಾಖಲಾಗಿದೆ.
ಸಮೀರ್ ಎಂ.ಡಿ. ಮೂಲತಃ ಬಳ್ಳಾರಿಯ ಕೌಲಬಜಾರ್‌ನ ಬಂಡಿಹಟ್ಟಿಯವನಾಗಿದ್ದು, 2011ರಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾನೆ. ಆದರೆ, ಆತನ ಆಧಾರ್ ಕಾರ್ಡ್‌ನಲ್ಲಿ ಇನ್ನೂ ಬಳ್ಳಾರಿಯ ವಿಳಾಸವೇ ದಾಖಲಾಗಿದೆ. ಶುಕ್ರವಾರ (ಆಗಸ್ಟ್ 22) ಧರ್ಮಸ್ಥಳ ಪೊಲೀಸರು ಆತನ ಬಳ್ಳಾರಿ ಮನೆಗೆ ಭೇಟಿ ನೀಡಿದಾಗ ಮನೆ ಬೀಗ ಹಾಕಿರುವುದನ್ನು ಕಂಡು, ಗೋಡೆಗೆ ನೋಟೀಸ್ ಅಂಟಿಸಿದ್ದಾರೆ.
ಬೆಂಗಳೂರಿನ ಜಿಗಣಿಯ ಹುಲ್ಲಹಳ್ಳಿಯ ಬಾಡಿಗೆ ಮನೆಗೂ ನೋಟೀಸ್ ತಲುಪಿಸಲಾಗಿದೆ. ಈಗಾಗಲೇ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯವು ಆಗಸ್ಟ್ 19ರಂದು ಸಮೀರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ, ಆತನಿಗೆ ವಿಚಾರಣೆಗೆ ಸಹಕರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಮೀರ್‌ಗೆ ಧರ್ಮಸ್ಥಳಕ್ಕೆ ಹೋಗಲು ಜೀವ ಭಯವಿದೆ ಎಂದು ಹೇಳಿದ್ದ, ಹಾಗಾಗಿ ತನಿಖೆಗೆ ಬರಲು ಒಪ್ಪಿರಲಿಲ್ಲ. ಆದರೆ ಈಗ ನ್ಯಾಯಾಲಯ ಆದೇಶಿಸಿದ್ದು ಆಗಸ್ಟ್ 24ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.