ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ (ಆರ್.ವಿ. ರೋಡ್‌ನಿಂದ ಬೊಮ್ಮಸಂದ್ರ) ಆಗಸ್ಟ್ 10, 2025ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು. ಉದ್ಘಾಟನೆಯ ಮೊದಲ ದಿನವೇ 83,000 ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸಿದ್ದಾರೆ. ಆದರೆ, ಆರ್.ವಿ. ರೋಡ್ ಇಂಟರ್‌ಚೇಂಜ್ ಮೆಟ್ರೋ ಸ್ಟೇಷನ್‌ನ ಸಣ್ಣ ಫ್ಲಾಟ್‌ಫಾರ್ಮ್ ಮತ್ತು ಗೊಂದಲಕಾರಿ ನಾಮಕರಣವು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಆರ್.ವಿ. ರೋಡ್ ಮೆಟ್ರೋ ಸ್ಟೇಷನ್‌ನ ಫ್ಲಾಟ್‌ಫಾರ್ಮ್ ತುಂಬಾ ಸಣ್ಣದಾಗಿದ್ದು, ಪೀಕ್ ಅವರ್‌ನಲ್ಲಿ ಜನಸಂದಣಿಯಿಂದಾಗಿ ಪ್ರಯಾಣಿಕರು ಟ್ರ್ಯಾಕ್‌ಗೆ ಬೀಳುವ ಸಂಭಾವನೀಯ ಅಪಾಯವಿದೆ. ಮೆಟ್ರೋ ಟ್ರ್ಯಾಕ್‌ನಲ್ಲಿ 750 ವೋಲ್ಟ್ ಡೈರೆಕ್ಟ್ ಕರೆಂಟ್ ಹಾದುಹೋಗುತ್ತಿದ್ದು, ಒಂದು ವೇಳೆ ಯಾರಾದರೂ ಟ್ರ್ಯಾಕ್‌ಗೆ ಬಿದ್ದರೆ ಜೀವಹಾನಿಯಾಗುವ ಸಾಧ್ಯತೆ ಇದೆ. ಈ ಸುರಕ್ಷತಾ ಆತಂಕವನ್ನು ಗಂಭೀರವಾಗಿ ಪರಿಗಣಿಸಿ, ಸಂಸದ ತೇಜಸ್ವಿ ಸೂರ್ಯ ಆರ್.ವಿ. ರೋಡ್ ಸ್ಟೇಷನ್‌ನಲ್ಲಿ ಪಿಎಸ್‌ಡಿ (ಪ್ಲಾಟ್‌ಫಾರ್ಮ್ ಸ್ಕ್ರೀನಿಂಗ್ ಡೋರ್) ಅಳವಡಿಕೆಗೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಪ್ರಯಾಣಿಕರೂ ಸಹ ಈ ಆಗ್ರಹವನ್ನು ಬೆಂಬಲಿಸಿದ್ದಾರೆ.
ಯೆಲ್ಲೋ ಲೈನ್‌ನ ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್‌ಗಳ ನಾಮಕರಣದಲ್ಲಿ ಗೊಂದಲ ಉಂಟಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸ್ಟೇಷನ್‌ಗೆ ಇನ್ಫೋಸಿಸ್ ಫೌಂಡೇಶನ್-ಕೋನಪ್ಪನ ಅಗ್ರಹಾರ ಎಂದು ಹೆಸರಿಡಲಾಗಿದ್ದು, ಕೋನಪ್ಪನ ಅಗ್ರಹಾರಕ್ಕೆ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಡಲಾಗಿದೆ. ಈ ಗೊಂದಲದಿಂದ ಪ್ರಯಾಣಿಕರು ತಪ್ಪಾದ ಸ್ಟೇಷನ್‌ಗಳಲ್ಲಿ ಇಳಿಯುವಂತಾದ ಸಮಸ್ಯೆ ಎದುರಿಸುತ್ತಿದ್ದಾರೆ. ಟಿಕೆಟ್ ತೆಗೆದುಕೊಂಡು ಪ್ರಯಾಣಿಸುವಾಗ ಈ ತಪ್ಪು ನಾಮಕರಣವು ಗೊಂದಲಕ್ಕೆ ಕಾರಣವಾಗಿದೆ.
ಈ ಸಮಸ್ಯೆಗಳ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಪ್ರತಿಕ್ರಿಯಿಸಿದ್ದಾರೆ. ಪಿಎಸ್‌ಡಿ ಡೋರ್‌ಗಳ ಅಳವಡಿಕೆಗೆ ಚಿಂತನೆ ನಡೆಯುತ್ತಿದ್ದು, ಮುಂಬರುವ ಪಿಂಕ್ ಲೈನ್‌ನ 12 ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆರ್.ವಿ. ರೋಡ್ ಮೆಟ್ರೋ ಸ್ಟೇಷನ್‌ಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಯೆಲ್ಲೋ ಲೈನ್‌ನ ಆರ್.ವಿ. ರೋಡ್ ಸ್ಟೇಷನ್‌ನ ಸಣ್ಣ ಫ್ಲಾಟ್‌ಫಾರ್ಮ್ ಮತ್ತು ನಾಮಕರಣ ಗೊಂದಲದಿಂದಾಗಿ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಬಿಎಂಆರ್‌ಸಿಎಲ್ ಸೂಕ್ತ ಕ್ರಮ ಕೈಗೊಂಡರೆ, ಅಮಾಯಕರ ಜೀವ ಉಳಿಯಲಿದೆ ಎಂಬುದು ಜನರ ಆಗ್ರಹವಾಗಿದೆ.