ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಾದ ಚರ್ಚೆಯ ನಡುವೆ, ಕೇಂದ್ರ ಸಚಿವರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು ಎಂಬ ಸುದ್ದಿಗೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಯಾರೊಂದಿಗೂ ಸಂಪರ್ಕದಲ್ಲಿಲ್ಲ ಎಂದು ಹೇಳಿರುವ ಯತ್ನಾಳ, ರಾಜ್ಯದಾದ್ಯಂತ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ ಎಂದಿದ್ದಾರೆ. “ನನ್ನ ನಿರ್ಣಯಕ್ಕೆ ಜನರು ಒಪ್ಪಿಗೆ ಸೂಚಿಸಿದ್ದಾರೆ. ಹಳ್ಳಿಗಳಲ್ಲಿ ನೂರಾರು ಜನ ಸೇರುತ್ತಿದ್ದಾರೆ. ಹಿಂದುತ್ವ ಉಳಿಯುವಂತೆ ನಿರ್ಣಯ ಕೈಗೊಳ್ಳಬೇಕೆಂದು ಸಲಹೆ ನೀಡುತ್ತಿದ್ದಾರೆ,” ಎಂದು ಅವರು ತಿಳಿಸಿದರು.
ಮೂರು ಪ್ರಮುಖ ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಯತ್ನಾಳ, ವಿಜಯದಶಮಿಯವರೆಗೂ ರಾಜ್ಯದಾದ್ಯಂತ ಸಂಚರಿಸುವುದಾಗಿ ಹೇಳಿದ್ದಾರೆ. “ನಾಳೆ ಹಾವೇರಿಯಲ್ಲಿ ಈಶ್ವರಪ್ಪನವರ ಜೊತೆ ಸಮಾವೇಶ ನಡೆಸುತ್ತೇವೆ. ಹಿಂದೂ ಯುವತಿಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಲವ್ ಜಿಹಾದ್‌ನಂತಹ ವಿಷಯಗಳನ್ನು ಖಂಡಿಸಿ ಈ ಸಮಾವೇಶ ಆಯೋಜಿಸುತ್ತಿದ್ದೇವೆ,” ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಸರ್ಕಾರವು ಹಿಂದೂಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಯತ್ನಾಳ, ಸರ್ಕಾರ ಕೆಲವು ಸಮುದಾಯಗಳನ್ನು ಗುರಿಯಾಗಿಸುತ್ತಿದೆ ಎಂದು ಟೀಕಿಸಿದ್ದಾರೆ. “ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಸರ್ಕಾರ, ಬಸವಾದಿ ಶರಣರೆಂದು ವಿಭೂತಿ ಮತ್ತು ಲಿಂಗವನ್ನೂ ತೆಗೆಯಲು ಹೇಳುತ್ತಿದೆ. ಇದು ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ,” ಎಂದು ವಾಗ್ದಾಳಿ ನಡೆಸಿದರು.
ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದಾರೆ. “ಈ ಸರ್ಕಾರವನ್ನು ಎದುರಿಸುವ ಸಾಮರ್ಥ್ಯ ವಿಜಯೇಂದ್ರ ಅವರಿಗಿಲ್ಲ. ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ, ಆದರೆ ಜನಾಕ್ರೋಶ ಯಾತ್ರೆಗೆ ಆರ್. ಅಶೋಕ ಮತ್ತು ಅಶ್ವತ್ಥ್ ನಾರಾಯಣ ಬರುತ್ತಿಲ್ಲ. ಶ್ರೀರಾಮುಲು ಕಾಟಾಚಾರಕ್ಕೆ ಬರುತ್ತಾರೆ. ವಿಜಯೇಂದ್ರ ಮೇಲೆ ಎಲ್ಲರಿಗೂ ಬೇಸರವಿದೆ,” ಎಂದು ತೀವ್ರ ವಾಗ್ದಾಳಿ ನಡೆಸಿದರು.