ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಜಾತಿ ನಿಂದನೆಯ ಭಯದಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಸಾವಿನ ಸುದ್ದಿಯಿಂದ ಆಘಾತಗೊಂಡ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಮೆಹಬೂಬ್ (22), ಮತ್ತು ಮೃತಪಟ್ಟ ತಂದೆಯ ಹೆಸರು ಸೈಯದ್ ಅಲಿ (50).
ಕಳೆದ ಒಂದು ವಾರದ ಹಿಂದೆ, ವಡಗೇರದಲ್ಲಿ ಜಮೀನಿನ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬವೊಂದರ ಜೊತೆ ಜಗಳ ಉಂಟಾಗಿತ್ತು. ಈ ಜಗಳವು ಮೆಹಬೂಬ್ ಮತ್ತು ಆ ಕುಟುಂಬದ ನಡುವೆ ಜಮೀನಿನ ಮೂಲಕ ಹಾದುಹೋಗುವ ವಿಷಯಕ್ಕೆ ಸಂಬಂಧಿಸಿತ್ತು. ಸ್ಥಳೀಯ ಹಿರಿಯರು ಕುಳಿತು ನ್ಯಾಯ ಪಂಚಾಯತಿ ನಡೆಸಿ ವಿವಾದವನ್ನು ಬಗೆಹರಿಸಿದ್ದರು. ಆದರೆ, ಬೇರೆ ಊರಿನಿಂದ ಬಂದ ದಲಿತ ಮುಖಂಡನೊಬ್ಬ ಜಾತಿ ನಿಂದನೆ ಕೇಸ್ ದಾಖಲಿಸಿ ಮೆಹಬೂಬ್‌ನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬೆದರಿಕೆಯಿಂದ ಮೆಹಬೂಬ್ ತೀವ್ರವಾಗಿ ಭಯಭೀತನಾಗಿದ್ದ. ಕೇಸ್ ದಾಖಲಾದರೆ ಮನೆ ಮಾನ-ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಬುಧವಾರ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಆತ್ಮಹತ್ಯೆಯ ಸುದ್ದಿ ತಿಳಿದ ತಂದೆ ಸೈಯದ್ ಅಲಿ ಅವರಿಗೆ ಹೃದಯಾಘಾತ ಸಂಭವಿಸಿತು. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸೈಯದ್ ಅಲಿ ಕೊನೆಯುಸಿರೆಳೆದರು.
ವಡಗೇರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.