ಯಾದಗಿರಿ\ವಿಜಯನಗರ: ಕಳೆದ ಐದು ದಿನಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ರೈತರ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಗುರುಸಣಗಿ, ನಾಯ್ಕಲ್ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳು ನೀರಿನಲ್ಲಿ ಮುಳುಗಿವೆ. ಹತ್ತಿ, ತೊಗರಿ, ಭತ್ತ, ಉದ್ದು, ಹೆಸರು ಮುಂತಾದ ಬೆಳೆಗಳು ನಾಶವಾಗಿವೆ.
ಸಾಲದ ಮೂಲಕ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ಮಳೆಗೆ ಬಲಿಯಾಗಿವೆ. ಮಳೆಯಿಲ್ಲದೇ ಒಣಗುತ್ತಿದ್ದ ಬೆಳೆಗಳನ್ನು ಈಗ ಭಾರೀ ಮಳೆಯಿಂದಾಗಿ ನೀರು ನುಂಗಿಹಾಕಿದೆ. ಜಮೀನುಗಳು ಜಲಾವೃತಗೊಂಡು, ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ವಿಜಯನಗರದಲ್ಲಿ ಮಳೆಯಿಂದ ಬೆಳೆ ಹಾನಿ
ವಿಜಯನಗರ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸಪೇಟೆಯ ಜಂಬುನಾಥ ಹಳ್ಳಿಯ ರಾಯರ ಕೆರೆಯ ಬಳಿಯ ಹೊಲಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಸಂಡೂರು ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದರಿಂದ, ಹರಿದುಬಂದ ಮಳೆನೀರು ಹೊಲಗಳಲ್ಲಿ ನುಗ್ಗಿದೆ. ಇದರಿಂದಾಗಿ ರೈತರ ಬೆಳೆಗಳು ನಾಶವಾಗಿ, ಆರ್ಥಿಕ ಸಂಕಷ್ಟ ಎದುರಾಗಿದೆ.