ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ಜೈ ಬಾಂಗ್ಲಾ’ ಘೋಷಣೆ: ದೇಶ ವಿರೋಧಿ ಆರೋಪ, ಮುಸ್ಲಿಂ ಮಹಿಳೆ ಬಂಧನ

BeFunky collage 2026 01 13T115100.435

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಜೈ ಬಾಂಗ್ಲಾ’ ಎಂಬ ಘೋಷಣೆ ಕೂಗಿದ ಆರೋಪದ ಮೇಲೆ 25 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಸರ್ಬಾನು ಖಾತೂನ್ ಎಂದು ಗುರುತಿಸಲಾಗಿದ್ದು, ಅವರು ಪಶ್ಚಿಮ ಬಂಗಾಳ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹುಲಿಮಂಗಲದ ಪೋಡು ಪ್ರದೇಶದ ಬಳಿ ಶೆಡ್‌ಗಳಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಹಿಂದೂ ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಬಾನು ಖಾತೂನ್ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾರೆ ಎಂಬ ಆರೋಪವಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರ ಆಧಾರದ ಮೇಲೆ ಹೆಬ್ಬಗೋಡಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸ್ ಪ್ರಕಾರ, ಈ ಘೋಷಣೆ ದೇಶ ವಿರೋಧಿ ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕೂಗಲಾಗಿದೆ ಎಂದು ಹೇಳಲಾಗಿದೆ.

ಇದೇ ಶೆಡ್‌ಗಳ ಸಮೀಪದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಜಹಿದುಲ್ ಇಸ್ಲಾಂ (35) ಮತ್ತು ಫಿರ್ದೋಸ್ (32) ಎಂಬ ಇಬ್ಬರು ಬಾಂಗ್ಲಾದೇಶ ಮೂಲದವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು. ಅವರು ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಸರ್ಬಾನು ಖಾತೂನ್ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ದಾಖಲೆಗಳ ಪರಿಶೀಲನೆಗಾಗಿ ಎಫ್‌ಆರ್‌ಆರ್‌ಒ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗುತ್ತಿದೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅಕ್ರಮ ವಲಸೆ ಮತ್ತು ದೇಶಭಕ್ತಿ ಸಂಬಂಧಿತ ವಿಷಯಗಳು ಮತ್ತೊಮ್ಮೆ ಚುರುಕಾಗಿವೆ.

Exit mobile version