ವಿಜಯಪುರ: ವಿಜಯಪುರ ಜಿಲ್ಲೆ ಮತ್ತು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ-ತಾಳಿಕೋಟೆ ರಾಜ್ಯ ಹೆದ್ದಾರಿಯ ಡೋಣಿ ನದಿಯ ಸೇತುವೆ ಜಲಾವೃತವಾಗಿದ್ದು, ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ತಾಳಿಕೋಟೆಯ ಸೇತುವೆಯ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆಯ ಎರಡೂ ಕಡೆ ಬಸ್, ಕಾರು, ಟ್ರಕ್‌ಗಳು ಸೇರಿದಂತೆ ಅನೇಕ ವಾಹನಗಳು ಸಿಲುಕಿಕೊಂಡಿವೆ. ಕೆಲವರು ಜಲಾವೃತ ಸೇತುವೆಯ ಮೇಲೆ ಬೈಕ್ ಮತ್ತು ಟ್ರಾಕ್ಟರ್‌ಗಳಲ್ಲಿ ಸಂಚರಿಸಲು ಯತ್ನಿಸಿದ್ದಾರೆ, ಇದು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಿದೆ. ಸ್ಥಳದಲ್ಲಿ ಪೊಲೀಸರ ಕೊರತೆಯಿಂದ ಜನರಲ್ಲಿ ಗೊಂದಲ ಮತ್ತು ಆತಂಕ ಮನೆಮಾಡಿದೆ. ವಾಹನ ಚಾಲಕರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ವಿಜಯಪುರ-ತಾಳಿಕೋಟೆ ಸಂಪರ್ಕ ಕಡಿತಗೊಂಡ ಕಾರಣ, ವಾಹನಗಳು ಮೂಕಿಹಾಳ ಮತ್ತು ಮಿಣಜಗಿ ಮಾರ್ಗದ ಮೂಲಕ ಸುಮಾರು 15 ಕಿ.ಮೀ. ಸುತ್ತು ಹಾಕಿ ಸಂಚರಿಸುವಂತಾಗಿದೆ.





