ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಭೀಕರ ನಿರ್ಲಕ್ಷ್ಯ: ಮರ್ಮಾಂಗದ ನೋವಿನಿಂದ ನರಳಿ ನರಳಿ ಪ್ರಾಣಬಿಟ್ಟ 45 ವರ್ಷದ ವ್ಯಕ್ತಿ

BeFunky collage 2026 04 22T131836.604

ಬೆಂಗಳೂರು: ವೈದ್ಯರನ್ನು ದೇವರಂತೆ ಕಾಣುವ ಸಮಾಜದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿತನಕ್ಕೆ ಬಡ ಜೀವವೊಂದು ಬಲಿಯಾಗಿದೆ. ಮರ್ಮಾಂಗದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದಿದ್ದ 45 ವರ್ಷದ ಶಾ ನವಾಜ್ ಎಂಬುವವರು ವೈದ್ಯರ ಅಮಾನವೀಯ ನಡೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ನಡೆದಿದ್ದೇನು?

ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಾ ನವಾಜ್, ಮರ್ಮಾಂಗದಲ್ಲಿ ಗಡ್ಡೆ ಬೆಳೆದಿದ್ದರಿಂದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ತಗುಲಿದೆ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆ ಭಾಗವನ್ನು ಕೊಯ್ದಿದ್ದರು. ಆದರೆ, ಚಿಕಿತ್ಸೆಯ ನಂತರ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮತ್ತು ಆಪರೇಷನ್ ವಿಭಾಗದ ನಡುವಿನ ಸಮನ್ವಯದ ಕೊರತೆಯಿಂದಾಗಿ ನವಾಜ್ ಅವರಿಗೆ ಸರಿಯಾದ ಶುಶ್ರೂಷೆ ಸಿಕ್ಕಿಲ್ಲ.

ಹೊಲಿಗೆ ಹಾಕದೆ ಡಿಸ್ಚಾರ್ಜ್:

ಗಾಯ ಇನ್ನೂ ಹಸಿಯಾಗಿರುವಾಗಲೇ, ಮರ್ಮಾಂಗಕ್ಕೆ ಹೊಲಿಗೆಯನ್ನೂ ಹಾಕದೆ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೂ ಮನೆಗೆ ಹೋಗುವಂತೆ ಒತ್ತಡ ಹೇರಲಾಗಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಮೇಲೆ ಮತ್ತೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ ಕಾರಣ, ಅಸಹಾಯಕ ಪತ್ನಿ ತನ್ನ ಪತಿಯನ್ನು ಆಸ್ಪತ್ರೆಯ ಮುಂದಿನ ಫುಟ್‌ಪಾತ್‌ನಲ್ಲೇ ಮೂರು ದಿನಗಳ ಕಾಲ ಇಟ್ಟುಕೊಂಡು ಕಣ್ಣೀರು ಹಾಕಿದ್ದಾರೆ.

ಮರ್ಮಾಂಗದಿಂದ ರಕ್ತ ಸುರಿಯುತ್ತಿದ್ದರೂ, ಅಸಹನೀಯ ನೋವಿನಿಂದ ನರಳುತ್ತಿದ್ದ ನವಾಜ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನವಾಜ್ ಅವರ ಸಾವಿನಿಂದಾಗಿ ಅವರ ಪತ್ನಿ ಮತ್ತು ಮಕ್ಕಳು ತಂದೆಯನ್ನು ಕಳೆದುಕೊಂಡು ದಿಕ್ಕಿಲ್ಲದಂತಾಗಿದ್ದಾರೆ. ವೈದ್ಯ ಲೋಕವೇ ತಲೆತಗ್ಗಿಸುವಂತೆ ಮಾಡಿರುವ ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Exit mobile version