ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಾನಂದ ಕುಡ್ತಲಕರ್ ಗುರುವಾರ (ಜುಲೈ 10) ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಸ್ಪತ್ರೆಯ ರೋಗಿಗಳಿಗೆ ಬೆಡ್ ಶೀಟ್ ಮತ್ತು ಪೀಠೋಪಕರಣ ಖರೀದಿಗಾಗಿ 3.43 ಲಕ್ಷ ರೂಪಾಯಿಯ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅಂಕೋಲಾದ ವಿಶಾಲ್ ಫರ್ನಿಚರ್ ಸಂಸ್ಥೆಯ ಮಾಲಿಕ ಮೌಸೀನ್ ಅಹಮ್ಮದ್ ಶೇಖ್‌ಗೆ ದೊರೆತಿತ್ತು. ಟೆಂಡರ್‌ನ ಹಣ ಬಿಡುಗಡೆಗೆ ಡಾ. ಕುಡ್ತಲಕರ್ 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ 30,000 ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ತುರ್ತು ಚಿಕಿತ್ಸೆಗಾಗಿ ಜನರು ಗೋವಾ ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ಆದ್ದರಿಂದ, ಜಿಲ್ಲಾ ಆಸ್ಪತ್ರೆಯೇ ಬಡವರಿಗೆ ಸಂಜೀವಿನಿಯಾಗಿದೆ. ಆದರೆ, ಈ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಹಿಂದಿನಿಂದಲೂ ಕೇಳಿಬಂದಿವೆ. ಡಾ. ಕುಡ್ತಲಕರ್ ಕಳೆದ 15 ವರ್ಷಗಳಿಂದ ಜಿಲ್ಲಾ ಸರ್ಜನ್ ಆಗಿದ್ದು, ಲಂಚ ಇಲ್ಲದೆ ಯಾವುದೇ ಕೆಲಸ ಮಾಡದಿರುವ ಆರೋಪಕ್ಕೆ ಒಳಗಾಗಿದ್ದರು.
ಡಾ. ಕುಡ್ತಲಕರ್ ಟೆಂಡರ್‌ನ ಹಣ ಬಿಡುಗಡೆಗೆ 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ರಾತ್ರಿ ಗುತ್ತಿಗೆದಾರ ಮೌಸೀನ್ ಅಹಮ್ಮದ್ ಶೇಖ್‌ನನ್ನು ಮನೆಗೆ ಕರೆಸಿ 20,000 ರೂಪಾಯಿ ಪಡೆದಿದ್ದರು. ಆದರೆ, ಇನ್ನೂ 30,000 ರೂಪಾಯಿ ಕೊಡಲು ಒತ್ತಾಯಿಸಿದಾಗ, ಗುತ್ತಿಗೆದಾರ ಗುರುವಾರ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿತು. ಈ ಹಿಂದೆಯೂ ಕುಡ್ತಲಕರ್ ಇದೇ ಗುತ್ತಿಗೆದಾರನಿಂದ 16 ಲಕ್ಷ ರೂಪಾಯಿಯ ಟೆಂಡರ್‌ಗೆ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕಾಟ ತಡೆಯಲಾಗದೆ, ಗುತ್ತಿಗೆದಾರನ ಪತ್ನಿ ತನ್ನ ಮಾಂಗಲ್ಯವನ್ನೇ ಅಡವಿಟ್ಟು ಹಣ ಕೊಟ್ಟಿದ್ದರು ಎನ್ನಲಾಗಿದೆ.