ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಚಿಕ್ಕನಾಯಕನಹಳ್ಳಿ ಜೋಗಿಹಳ್ಳಿಯಲ್ಲಿ ಶಿಕ್ಷಣ ಇಲಾಖೆಯ ಎಫ್‌ಡಿಎ (FDA) ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಈಗ ಕೊಲೆ ಪ್ರಕರಣವಾಗಿ ಬದಲಾಗಿದೆ. ಆಕೆಯನ್ನು ಸ್ವಂತ ಸಹೋದರಿ ಅನುಸೂಯಾ ಮತ್ತು ದತ್ತು ಪುತ್ರ (ಸಾಕು ಮಗ) ಚಂದ್ರಶೇಖರ್ ಇಬ್ಬರೂ ಸೇರಿ ತಡರಾತ್ರಿ ಉಸಿರುಗಟ್ಟಿಸಿ ಕೊಂದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಜಯಲಕ್ಷ್ಮಿ ಅವರು ಗಂಡನನ್ನು ಕಳೆದುಕೊಂಡ ನಂತರ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ಸಹೋದರಿ ಅನುಸೂಯಾಳ ಮಗ ಚಂದ್ರಶೇಖರ್‌ನನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಕಳೆದ 20 ವರ್ಷಗಳಿಂದ ಆಕೆಯ ಗೆಳೆಯ ಶ್ರೀನಿವಾಸ್ ಅವರೊಂದಿಗೆ ಆತ್ಮೀಯ ಸಂಬಂಧವಿತ್ತು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು.
ಕಳೆದ ಎಂಟು ತಿಂಗಳ ಹಿಂದೆ ಅನುಸೂಯಾ ಮತ್ತು ಚಂದ್ರಶೇಖರ್ ಜಯಲಕ್ಷ್ಮಿ ನಿವಾಸಕ್ಕೆ ಬಂದ ನಂತರ ಸಮಸ್ಯೆ ಆರಂಭವಾಯಿತು. ಇವರು ಶ್ರೀನಿವಾಸ್ ಅವರ ಮೇಲೆ ಒತ್ತಡ ಹಾಕಿ ಮನೆ ಬಿಡುವಂತೆ ಮಾಡಿದರು. ಜಯಲಕ್ಷ್ಮಿ ತುರುವೇಕೆರೆಯಲ್ಲಿ ಬೇರೆ ಮನೆ ಮಾಡಲು ನಿರ್ಧರಿಸಿ ಬಾಡಿಗೆ ಮನೆಗೆ ಅಡ್ವಾನ್ಸ್ ಕೂಡ ಕಟ್ಟಿದ್ದರು. ಆಕೆ ಮನೆ ತೊರೆಯುವ ವಿಚಾರ ತಿಳಿದ ಅನುಸೂಯಾ ಮತ್ತು ಚಂದ್ರಶೇಖರ್ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ಆಕೆಯ ಸಾವನ್ನು ಹೃದಯಾಘಾತ ಎಂದು ನಂಬಿಸಲು ಪ್ರಯತ್ನಿಸಿದ್ದ ಆರೋಪಿಗಳು ಅಂತ್ಯಕ್ರಿಯೆಗೆ ಸಿದ್ಧಗೊಂಡಿದ್ದರು. ಆದರೆ ಗೆಳೆಯ ಶ್ರೀನಿವಾಸ್ ಅನುಮಾನಗೊಂಡು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ತನಿಖೆ ಆರಂಭವಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಬೆಳಕಿಗೆ ಬಂದಿದೆ.
ಕೊಲೆಗೆ ಮೂಲ ಕಾರಣ ಆರ್ಥಿಕ ಲಾಭ ಮತ್ತು ಆಕೆಯ ಸರ್ಕಾರಿ ಉದ್ಯೋಗದ ಆಸೆ ಎಂಬ ಅನುಮಾನ ಮೂಡಿದ್ದು, ಪೊಲೀಸರು ಆ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.





