ಸೋಶಿಯಲ್ ಮೀಡಿಯಾದಲ್ಲಿ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ್ದಕ್ಕೆ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಉಡೇವಾ ಮೂಲದ ಮಂಜುನಾಥ್ (28) ಎಂಬ ಯುವಕನನ್ನು ಯುವತಿಯ ಭಾವಿ ಪತಿ ವೇಣು ಮತ್ತು ಅವನ ಸ್ನೇಹಿತರು ಚಾಕುವಿನಿಂದ ಇರಿದು ಕೊಂದಿದ್ದಾರೆ.
ಯುವತಿಯೊಂದಿಗೆ ವೇಣುಗೆ ವಿವಾಹ ನಿಶ್ಚಯವಾಗಿದ್ದು, ಎಂಗೇಜ್‌ಮೆಂಟ್ ಆಗಿತ್ತು. ಆದರೆ ಮಂಜುನಾಥ್ ಸೋಶಿಯಲ್ ಮೀಡಿಯಾದಲ್ಲಿ ಆಕೆಗೆ ಬರ್ತ್‌ಡೇ ವಿಶ್ ಮಾಡಿ ಮೆಸೇಜ್ ಕಳುಹಿಸಿದ್ದ. ಇದು ವೇಣುಗೆ ತಿಳಿದು ಆಕ್ರೋಶಕ್ಕೆ ಕಾರಣವಾಗಿದೆ.
ಅಡಿಕೆ ಕೆಲಸಕ್ಕಾಗಿ ಮಂಜುನಾಥ್ ಅತ್ತಿಗನಾಳು ಗ್ರಾಮಕ್ಕೆ ಬಂದಿದ್ದ. ಮಾರ್ಗ ಮಧ್ಯೆ ವೇಣು ಮತ್ತು ಅವನ ಸ್ನೇಹಿತರು ಮಂಜುನಾಥ್‌ನ್ನು ತಡೆದು ಗಲಾಟೆ ಶುರು ಮಾಡಿದ್ದಾರೆ. ಗಲಾಟೆ ತೀವ್ರಗೊಂಡು ಚಾಕುವಿನ ದಾಳಿಗೆ ತಿರುಗಿದೆ. ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಜುನಾಥ್ ಮೃತಪಟ್ಟಿದ್ದಾರೆ.
ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ. ಸಣ್ಣ ವಿಷಯಕ್ಕೆ ಪ್ರಾಣ ಹೋದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೋಶಿಯಲ್ ಮೀಡಿಯಾ ಸ್ನೇಹದಿಂದ ಉಂಟಾದ ದುರಂತವಿದು, ಆಕ್ರೋಶ ನಿಯಂತ್ರಿಸದಿದ್ದರೆ ಇಂತಹ ದುರ್ಘಟನೆಗಳು ಮರುಕಳಿಸಬಹುದು ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡುತ್ತಿದೆ.
