ಬಜ್ಪೆಯ ಕಿನ್ನಿಪದವು ಸಮೀಪ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಕೊಲೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿದೆ. ಕೊಲೆಯಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ “ಫಿನೀಶ್” ಎಂಬ ಪೋಸ್ಟ್ ವೈರಲ್ ಆಗಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ನಿನ್ನೆ ರಾತ್ರಿ ಸುಹಾಸ್ ಶೆಟ್ಟಿಯನ್ನು ಹಂತಕರು ಯೋಜಿತವಾಗಿ ಹತ್ಯೆಗೈದಿದ್ದಾರೆ. ಈ ಕೊಲೆಯನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನ ಫಾಜಿಲ್ ಎಂಬಾತನ ಕೊಲೆಗೆ ಸೇಡಿನ ಭಾಗವೆಂದು ಶಂಕಿಸಲಾಗಿದೆ. ಕೊಲೆಯ ಬಳಿಕ “ಫಿನೀಶ್” ಎಂಬ ಪೋಸ್ಟ್ Troll_mayadiaka ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪ್ರಕಟವಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಗಮನ ಸೆಳೆದಿದೆ.
ಪೂರ್ವಯೋಜಿತ ಕೊಲೆಯ ಶಂಕೆ:
ಮಾರ್ಚ್ 31ರಂದು ಟಾರ್ಗೆಟ್ ಕಿಲ್ಲರ್-03 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿಯ ಫೋಟೋವನ್ನು ಹಂಚಿಕೊಂಡು, ಶೀಘ್ರದಲ್ಲಿ ಸೇಡು ತೀರಿಸಿಕೊಳ್ಳುವುದಾಗಿ ಪ್ರಚೋದನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಬೆಳವಣಿಗೆಯಿಂದಾಗಿ ಸುಹಾಸ್ ಶೆಟ್ಟಿಯ ಹತ್ಯೆಗೆ ಮುಂಚಿತವಾಗಿಯೇ ಯೋಜನೆ ರೂಪಿಸಲಾಗಿತ್ತೇ ಎಂಬ ಅನುಮಾನಗಳು ಮೂಡಿವೆ.
ಫಿನೀಶ್’ ಪೋಸ್ಟ್‌ನ ವಿವಾದ:
ಕೊಲೆಯಾದ ಕೆಲವೇ ನಿಮಿಷಗಳಲ್ಲಿ Troll_mayadiaka ಇನ್‌ಸ್ಟಾಗ್ರಾಂ ಖಾತೆಯಿಂದ “ಫಿನೀಶ್” ಎಂಬ ಪೋಸ್ಟ್ ಬಹಿರಂಗವಾಯಿತು. ಜೊತೆಗೆ, “Waiting for next wicket” ಎಂಬ ಕಾಮೆಂಟ್‌ನೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡು ಸಂಭ್ರಮಿಸಲಾಗಿದೆ. ಮಂಗಳೂರಿನಿಂದಲೇ ಹಲವು ನಕಲಿ ಇನ್‌ಸ್ಟಾಗ್ರಾಂ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಸುಹಾಸ್ ಶೆಟ್ಟಿಯ ಹಿನ್ನೆಲೆ:
ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತರಾಗಿದ್ದು, ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯರಾಗಿದ್ದರು. ಅವರ ವಿರುದ್ಧ ಒಟ್ಟು ಐದು ಕಾನೂನು ಪ್ರಕರಣಗಳು ದಾಖಲಾಗಿದ್ದವು—ಬಜ್ಪೆ ಠಾಣೆಯಲ್ಲಿ ಮೂರು, ಬೆಳ್ತಂಗಡಿ ಮತ್ತು ಸುರತ್ಕಲ್ ಠಾಣೆಗಳಲ್ಲಿ ತಲಾ ಒಂದು. ಒಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು, ಎರಡು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದವು, ಮತ್ತು ಎರಡರಲ್ಲಿ ಖುಲಾಸೆಯಾಗಿದ್ದರು. ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ A1 ಆರೋಪಿಯಾಗಿದ್ದು, ಮಾರ್ಚ್‌ನಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ರೌಡಿಶೀಟ್ ತೆರೆದಿದ್ದರು.
ಸಿನಿಮಾ ಶೈಲಿಯ ಕೊಲೆ:
ಹಂತಕರು ಸುಹಾಸ್ ಶೆಟ್ಟಿಯನ್ನು ಸಿನಿಮಾ ಶೈಲಿಯಲ್ಲಿ ಕೊಲೆಗೈದಿದ್ದಾರೆ. ನಿನ್ನೆ ರಾತ್ರಿ 8:30ರ ಸುಮಾರಿಗೆ ಸುಹಾಸ್ ಶೆಟ್ಟಿ ತಮ್ಮ ಸಹಚರರೊಂದಿಗೆ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದಾಗ, ಮೀನಿನ ಟೆಂಪೋ ಮತ್ತು ಸ್ವಿಫ್ಟ್ ಕಾರಿನ ಮೂಲಕ ಅವರನ್ನು ಬೆನ್ನಟ್ಟಿದ್ದಾರೆ. ಬಜ್ಪೆಯ ಕಿನ್ನಿಪದವು ಸಮೀಪ ಮೀನಿನ ಟೆಂಪೋ ಮೂಲಕ ಸುಹಾಸ್‌ನ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಈ ಡಿಕ್ಕಿಯಿಂದ ಕಾರು ಸಲೂನ್‌ಗೆ ನುಗ್ಗಿತು. ಈ ಸಂದರ್ಭವನ್ನು ಬಳಸಿಕೊಂಡ ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು ಹಂತಕರು ಮಾರಕಾಸ್ತ್ರಗಳೊಂದಿಗೆ ಸುಹಾಸ್‌ನ ಮೇಲೆ ದಾಳಿ ನಡೆಸಿ, ಸಾರ್ವಜನಿಕರ ಕಣ್ಣೆದುರೇ ಕೊಚ್ಚಿಕೊಂದಿದ್ದಾರೆ. ಈ ಭೀಕರ ದೃಶ್ಯವನ್ನು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.