ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಕೇಬಲ್ ಸೇತುವೆಯಾದ ಸಿಗಂದೂರು ಸೇತುವೆ ಉದ್ಘಾಟನೆಯ ಸುತ್ತ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿ ಶುರುವಾಗಿದೆ. ಈ ವಿಚಾರದಲ್ಲಿ ಕ್ರೆಡಿಟ್ ಕದನದ ಜೊತೆಗೆ ಶಿಷ್ಟಾಚಾರ ಉಲ್ಲಂಘನೆಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನನ್ನ ಬಳಿ ಪೂರ್ವನಿಯೋಜಿತ ಕಾರ್ಯಕ್ರಮವಿತ್ತು. ಹೀಗಾಗಿ ಉದ್ಘಾಟನೆಯನ್ನು ಮುಂದೂಡಬೇಕೆಂದು ಪತ್ರ ಬರೆದಿದ್ದೆ. ಆದರೂ ಸೇತುವೆ ಉದ್ಘಾಟನೆಯಾಗಿದೆ,” ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಆರೋಪವನ್ನು ತಳ್ಳಿಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್, “60 ವರ್ಷಗಳಲ್ಲಿ ಕಾಂಗ್ರೆಸ್‌ಗೆ ಸಾಧ್ಯವಾಗದಿದ್ದದ್ದನ್ನು ಮೋದಿ ಸರ್ಕಾರ ಮಾಡಿ ತೋರಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯಗೆ ಹೊಟ್ಟೆಯುರಿ ಉಂಟಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಅಶೋಕ್ ಮುಂದುವರಿದು, “ತಾನು ಕೊಡ, ಪರರನ್ನು ಕೊಡಲು ಬಿಡ. ಇಂದಿನ ಸಂತೋಷದ ದಿನದಂದು ಸಿಗಂದೂರಿನ ಜನರು ಸಂಭ್ರಮಿಸುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಐತಿಹಾಸಿಕ ದಿನದಂದು ಜನರ ಸಂತೋಷದಲ್ಲಿ ಭಾಗಿಯಾಗುವ ಬದಲು, ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ,” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆಯ ಕ್ರೆಡಿಟ್ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ವಿವಾದ ರಾಜಕೀಯವಾಗಿ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.