ಬೆಂಗಳೂರು: ದ್ವಿಭಾಷಾ ಸೂತ್ರವನ್ನು ರಾಜ್ಯ ಸರ್ಕಾರದ ಅಧಿಕೃತ ನೀತಿಯಾಗಿ ರೂಪಿಸಲು ಪ್ರಯತ್ನಿಸುವುದಾಗಿ ಮತ್ತು ಈ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚೆಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ, ನಗರದಲ್ಲಿ ಜನಪ್ರಕಾಶನದಿಂದ ಪ್ರಕಟವಾಗಿರುವ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಸಂಪಾದಿಸಿದ ‘ಕುವೆಂಪು ವಿಚಾರ ಕ್ರಾಂತಿ’ ಕೃತಿ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ಜಾಗೃತಿ ಅಗತ್ಯ!
ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಎಲ್ಲ ಜನರಿಗೆ ಸಂವಿಧಾನದ ಅರಿವು ಮೂಡಿಸಲು ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸುವ ಸಲಹೆಯನ್ನು ಪರಿಗಣಿಸುವುದಾಗಿ ತಿಳಿಸಿದರು. ಆದರೆ, ಜನರು ಸಂವಿಧಾನವನ್ನು ಓದುವ ಅಥವಾ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಸವಣ್ಣ, ಕುವೆಂಪು ಸೇರಿದಂತೆ ಹಲವು ಮಹಾನೀಯರು ತಮ್ಮ ಕೃತಿಗಳು, ವಚನಗಳು ಮತ್ತು ಸಂದೇಶಗಳ ಮೂಲಕ ಮೌಢ್ಯತೆಯನ್ನು ತೊರೆಯಲು ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಕರೆ ನೀಡಿದ್ದಾರೆ. ಈ ಸಂದೇಶಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಾಮಾನ್ಯವಾಗಿ ದೇವಾಲಯಕ್ಕೆ ಭೇಟಿ ನೀಡದಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, ದೇವಾಲಯಕ್ಕೆ ಹೋದರೆ ಕುಂಕುಮ ಹಚ್ಚಿದರೂ ಅದಕ್ಕೆ ದೊಡ್ಡ ಕತೆ ಕಟ್ಟಲಾಗುತ್ತದೆ ಎಂದರು. ರಾಜಕಾರಣಿಯೊಬ್ಬ ದೇವಾಲಯಕ್ಕೆ ಹೋಗದಿದ್ದರೆ, “ಅಹಂಕಾರ ಎಷ್ಟಿದೆ, ಇವರಿಗೆ ಓಟ್ ಹಾಕಬೇಡಿ” ಎಂದು ಜನರು ಹೇಳುತ್ತಾರೆ ಎಂದು ಅವರು ವಿಷಾದಿಸಿದರು.
ವಿಪಕ್ಷದವರು ಕಾಂಗ್ರೆಸ್ ಸರ್ಕಾರದ “ಕಾಲುಗುಣ” ಸರಿಯಿಲ್ಲ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆಯಾಗುತ್ತಿದೆ ಎಂದು ಸಮರ್ಥಿಸಿಕೊಂಡರು. “ವಿಪಕ್ಷದವರು ಮೂಢಾತ್ಮರು. ರೈತರಿಗೆ ಬೀಜ, ಗೊಬ್ಬರಕ್ಕೆ ಯಾವಾಗಲಾದರೂ ತೊಂದರೆಯಾಯಿತೇ? ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಪ್ರಶ್ನಿಸಿದರು.
ಆರ್ಥಿಕ ಶಿಸ್ತಿನ ಸಮರ್ಥನೆ:
ವಿಪಕ್ಷದವರು ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕಿಸಿದ್ದಕ್ಕೆ, ಕಾವೇರಿ ಜಲಾನಯನ ಪ್ರದೇಶದ ಶಾಸಕರಿಗೆ ತಲಾ 50 ಕೋಟಿ ರೂ. ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು. “ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ದಿವಾಳಿತನವಾಗುತ್ತದೆ ಎಂದಿದ್ದವರು ಈಗ ಏನು ಹೇಳುತ್ತಾರೆ? ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಸ್ತಿನೊಂದಿಗೆ ಆಡಳಿತ ನಡೆಸುತ್ತಿದೆ,” ಎಂದು ಸಿದ್ದರಾಮಯ್ಯ ಅವರು ಸಮರ್ಥನೆ ಮಾಡಿಕೊಂಡರು.