ರಾಜ್ಯದಲ್ಲಿ 184 ಹೊಸ ಇಂದಿರಾ ಕ್ಯಾಂಟೀನ್‌ ಆರಂಭ: ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ 9 ಇಂದಿರಾ ಕ್ಯಾಂಟೀನ್ ಉದ್ಘಾಟಸಿದ ಸಿಎಂ

Befunky collage 2025 05 25t092901.475

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್‌ನಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರೂ ಜೊತೆಗಿದ್ದರು. ಜೆಡಿಎಸ್‌ನಿಂದ ಈಗಾಗಲೇ ಅಂತರ ಕಾಯ್ದುಕೊಂಡಿರುವ ಜಿ.ಟಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿದ್ದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಅವರು ರಾಜ್ಯದ ಬಡವರಿಗೆ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡ, ಸಿದ್ದರಾಮಯ್ಯ ಅವರ ಆಡಳಿತವನ್ನು ಹಾಡಿಹೊಗಳಿದರು. “ಬಡವರಿಗೆ ಐದು ಕೆಜಿ ಅಕ್ಕಿ ಒದಗಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. 47 ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರ ಮಾತಿಗೆ ಗೌರವ ಕೊಡುತ್ತಾರೆ. ಗ್ರೇಟರ್ ಮೈಸೂರು ಯೋಜನೆಯ ಮೂಲಕ ನಿಮ್ಮ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸಗಳು ಒಳ್ಳೆಯ ದಿಕ್ಕಿನಲ್ಲಿ ಸಾಗಿವೆ. ಯುಜಿಡಿ ಸಮಸ್ಯೆಯನ್ನು ನೀವೇ ಬಗೆಹರಿಸಬೇಕು, ಏಕೆಂದರೆ ನೀವಲ್ಲದಿದ್ದರೆ ಇದನ್ನು ಯಾರೂ ಮಾಡಲು ಸಾಧ್ಯವಿಲ್ಲ,” ಎಂದು ಗುಣಗಾನ ಮಾಡಿದರು.

ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ, ಇಂದಿರಾ ಕ್ಯಾಂಟೀನ್‌ಗಳ ಉದ್ದೇಶವನ್ನು ವಿವರಿಸಿದರು. “ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಬಡವರು, ಕೂಲಿ ಕಾರ್ಮಿಕರು, ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಹಸಿವನ್ನು ನೀಗಿಸಲು ಇಂದಿರಾ ಕ್ಯಾಂಟೀನ್‌ ಆರಂಭಿಸಿದೆ. 2017ರಲ್ಲಿ ರಾಹುಲ್ ಗಾಂಧಿಯವರಿಂದ ಈ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದೆವು. ಆದರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಈ ಕ್ಯಾಂಟೀನ್‌ಗಳು ಸೊರಗಿದವು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು, ರಾಜ್ಯಾದ್ಯಂತ 184 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ. ಹಿನಕಲ್‌ನಲ್ಲಿ 9 ಕ್ಯಾಂಟೀನ್‌ಗಳ ಉದ್ಘಾಟನೆಯೊಂದಿಗೆ ಈ ಯೋಜನೆಗೆ ಚಾಲನೆ ನೀಡಿದ್ದೇವೆ,” ಎಂದರು.

ಸಿದ್ದರಾಮಯ್ಯ ಅವರು ಹಿನಕಲ್ ಗ್ರಾಮದ ಕೊಡುಗೆಯನ್ನು ಸ್ಮರಿಸಿದರು. “ಹಿನಕಲ್ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಈ ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಹಂತಹಂತವಾಗಿ ನೆರವೇರಿಸಲಾಗುವುದು. ಎಂಜಿನಿಯರ್‌ಗಳ ನೇಮಕಾತಿ, ಪಿಯುಸಿ ಕಾಲೇಜು ಸ್ಥಾಪನೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು,” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೋವಿಡ್ ಜಾಗೃತಿಯನ್ನೂ ಮೂಡಿಸಲಾಯಿತು. ಸಿಎಂ ಸಿದ್ದರಾಮಯ್ಯ, ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಅವರು ಮಾಸ್ಕ್ ಧರಿಸಿ, ಕೋವಿಡ್-19 ಮುಂಜಾಗ್ರತೆ ಕ್ರಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿದರು.

Exit mobile version