ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ

Untitled design 2025 09 27t194419.021

ಬೆಂಗಳೂರು, ಸೆಪ್ಟೆಂಬರ್ 27, 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೆ.27) ಬೆಂಗಳೂರು ನಗರದ ರಸ್ತೆಗಳ ಸ್ಥಿತಿಗತಿ ಮತ್ತು ಗುಂಡಿಗಳ ಸಮಸ್ಯೆಯನ್ನು ನೇರವಾಗಿ ಪರಿಶೀಲಿಸಲು ಸಿಟಿ ರೌಂಡ್ಸ್ ನಡೆಸಿದರು. ಮಧ್ಯಾಹ್ನ 3 ಗಂಟೆಗೆ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಿಂದ ಹೊರಟ ಸಿಎಂ, ವಿಂಡ್ಸರ್ ಮ್ಯಾನರ್ ಬಳಿಯ ರಸ್ತೆಗೆ ಭೇಟಿ ನೀಡಿ, ನಡೆಯುತ್ತಿರುವ ದುರಸ್ತಿ ಕಾರ್ಯಗಳನ್ನು ವೀಕ್ಷಿಸಿದರು. ನಂತರ, ವಿಬಿಆರ್ ಗಾರ್ಡನ್ ರಸ್ತೆ, ಹೆಬ್ಬಾಳ ಹೊರವರ್ತುಲ ರಸ್ತೆ, ಹೆಣ್ಣೂರು ಫ್ಲೈಓವರ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ತೆರಳಿ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವ ಕೆ.ಜೆ. ಜಾರ್ಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಜಿಬಿಎ ಆಯುಕ್ತ ಮಹೇಶ್ವರ ರಾವ್ ಮತ್ತು ಇತರ ಅಧಿಕಾರಿಗಳು ಜೊತೆಗಿದ್ದರು.

ಸಿಎಂ ಸಿದ್ದರಾಮಯ್ಯ ಅವರು ರಸ್ತೆ ಗುಂಡಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದರು. 30 ದಿನಗಳೊಳಗೆ ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ಇದು ವಿಫಲವಾದರೆ, ಕಮಿಷನರ್‌ಗಳನ್ನು ಅಮಾನತುಗೊಳಿಸಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಗುಣಮಟ್ಟದ ಕಾಮಗಾರಿಯ ಮೇಲೆ ಒತ್ತು ನೀಡಿದ ಅವರು, ಕೇವಲ ಜೆಲ್ಲಿ ಕಲ್ಲುಗಳಿಂದ ಗುಂಡಿಗಳನ್ನು ತುಂಬದೆ, ಸಿಮೆಂಟ್ ಬಳಸಿ ಸಮರ್ಪಕ ದುರಸ್ತಿ ಕಾರ್ಯ ನಡೆಸಬೇಕು. ಗಡುವಿನೊಳಗೆ ಕೆಲಸ ಪೂರೈಸದಿದ್ದರೆ, ಅಧಿಕಾರಿಗಳು ತಕ್ಕ ಉತ್ತರ ನೀಡಬೇಕಾಗುತ್ತದೆ, ಎಂದು ಎಚ್ಚರಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಗುಂಡಿಗಳ ದುರಸ್ತಿಗೆ ಸರಿಯಾದ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಇಷ್ಟೊಂದು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಕಿಡಿಕಾರಿದರು.

ಮೆಟ್ರೋ ಕಾಮಗಾರಿಯಿಂದ ಉಂಟಾದ ರಸ್ತೆ ನಿರ್ವಹಣೆಯ ನಿರ್ಲಕ್ಷ್ಯದ ಬಗ್ಗೆಯೂ ಸಿಎಂ ಗಮನ ಹರಿಸಿ, ಸರ್ವೀಸ್ ರಸ್ತೆಗಳ ಕಾಳಜಿಯ ಕೊರತೆ, ವೈಟ್ ಟಾಪಿಂಗ್ ರಸ್ತೆಗಳ ಮತ್ತು ಮಳೆನೀರು ಹರಿವಿನ ವ್ಯವಸ್ಥೆ ಮುಚ್ಚಿರುವುದಕ್ಕೆ ಅಧಿಕಾರಿಗಳಿಂದ ವಿವರಣೆ ಕೇಳಿದರು. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ತಕ್ಷಣವೇ ರಿಪೇರಿ ಕಾರ್ಯ ಆರಂಭಿಸಿ, ಮಳೆನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನು ಖಾತರಿಪಡಿಸಿ ಎಂದು ಸೂಚಿಸಿದರು.

ತ್ಯಾಜ್ಯ ನಿರ್ವಹಣೆಯ ಕುರಿತು ಹೆಬ್ಬಾಳ ಹೊರವರ್ತುಲ ರಸ್ತೆ ಮತ್ತು ಹೆಣ್ಣೂರು ಫ್ಲೈಓವರ್ ಬಳಿ ರಸ್ತೆಯ ಬದಿಯಲ್ಲಿ ಜಮಾಯಿಸಿದ ಕಸವನ್ನು ಕಂಡ ಸಿಎಂ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಷ್ಟು ಹಳೆಯ ಕಸ ಇಲ್ಲದೆ. ಇಷ್ಟು ವರ್ಷಗಳಲ್ಲಿ ಬಂದ ಅಷ್ಟೂ ಅಧಿಕಾರಿಗಳು ಇದನ್ನು ಕಂಡಿಲ್ಲವೇ ? ಎಂದು ಪ್ರಶ್ನಿಸಿದ ಅವರು, 24 ಗಂಟೆಗಳೊಳಗೆ ತ್ಯಾಜ್ಯವನ್ನು ತೆರವುಗೊಳಿಸಲು ಖಡಕ್ ಆದೇಶ ನೀಡಿದರು. ಬೈರತಿ ಕ್ರಾಸ್ ಬಳಿ ಕಾರನ್ನು ನಿಲ್ಲಿಸಿ, ವಾರ್ಡ್ ನಂ. 23ರ ಘನ ತ್ಯಾಜ್ಯ ಕೇಂದ್ರದ ನಿರ್ಲಕ್ಷ್ಯಕ್ಕಾಗಿ ಮುಖ್ಯ ಎಂಜಿನಿಯರ್‌ಗಳಾದ ಪ್ರಹ್ಲಾದ್ ಮತ್ತು ರಾಘವೇಂದ್ರ ಪ್ರಸಾದ್‌ಗೆ ನೋಟಿಸ್‌ ನೀಡಲು ಸೂಚನೆ ನೀಡಿದರು.

ವೈಟ್ ಟಾಪಿಂಗ್ ರಸ್ತೆಗಳ ನಿರ್ವಹಣೆಯ ಬಗ್ಗೆಯೂ ಸಿಎಂ ಸ್ಪಷ್ಟವಾಗಿ ಮಾತನಾಡಿದರು. ವೈಟ್ ಟಾಪಿಂಗ್ ಮಾಡಿದ ರಸ್ತೆಗಳ ನಿರ್ವಹಣೆಗೆ ಜಿಬಿಎ (ಹಿಂದಿನ ಬಿಬಿಎಂಪಿ) ಯಾವುದೇ ಹಣ ನೀಡುವುದಿಲ್ಲ. ಗುತ್ತಿಗೆದಾರರೇ ರಸ್ತೆಯ ದುರಸ್ತಿ ಮತ್ತು ನಿರ್ವಹಣೆಯ ಜವಾಬ್ದಾರಿ ಹೊರಬೇಕು. ಕೆಲಸದಲ್ಲಿ ಲೋಪವಾದರೆ, ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳೇ ಹೊಣೆಗಾರರು ಎಂದು ಎಚ್ಚರಿಸಿದರು.

Exit mobile version