ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹುಡುಗಿಯರನ್ನು ದುರ್ಬಳಕೆ ಮಾಡುವ ಜಾಲವನ್ನು ಬಯಲಿಗೆಳೆದ ಯುವಕ ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾದ ಸಂತೋಷ್, ಆತ್ಮಹತ್ಯೆಗೆ ಮುನ್ನ ಜಾಲದ ಬಗ್ಗೆ ಆಡಿಯೋ ಮತ್ತು ಫೋಟೋ ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾನೆ.
ಸಂತೋಷ್ ಫೇಸ್‌ಬುಕ್‌ನಲ್ಲಿ ಯುವತಿಯ ಫೇಕ್ ಪ್ರೊಫೈಲ್ ರಚಿಸಿ, ಈ ಜಾಲವನ್ನು ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಆರೋಪಿಗಳಿಂದ ಮಾಹಿತಿ ಮತ್ತು ಹಣವನ್ನು ಪಡೆದಿದ್ದ. ಆದರೆ, ಫೇಕ್ ಪ್ರೊಫೈಲ್ ತನ್ನದೆಂದು ತಿಳಿದ ಆರೋಪಿಗಳಾದ ಚನಮಾಂವದ ಚರಣ್, ಲೋಕೇಶ್, ಮನೋಜ್ ಮತ್ತು ಇತರ ನಾಲ್ವರು, ಸಂತೋಷ್‌ನ ಮನೆಗೆ ತೆರಳಿ ಬೆದರಿಕೆ ಹಾಕಿದ್ದಾರೆ. ಅವರು ಆತನ ಟ್ಯಾಬ್‌ಗಳನ್ನು ಕಸಿದುಕೊಂಡು ಗಲಾಟೆ ಮಾಡಿದ್ದಾರೆ.
ಸಂತೋಷ್ ತಾನು ಪ್ರೀತಿಸಿದ ಯುವತಿ ಕೂಡ ಈ ಜಾಲಕ್ಕೆ ಬೆಂಬಲ ನೀಡುತ್ತಿದ್ದಾಳೆ ಎಂದು ಆಡಿಯೋದಲ್ಲಿ ಆರೋಪಿಸಿದ್ದಾನೆ. ಜಾಲವನ್ನು ಬಯಲಿಗೆಳೆಯಲು ಮತ್ತು ತಾನು ಪ್ರೀತಿಸಿದ ಯುವತಿಯನ್ನು ರಕ್ಷಿಸಲು ಈ ಕೃತ್ಯಕ್ಕೆ ಕೈಹಾಕಿದ್ದಾಗಿ ತಿಳಿಸಿದ್ದಾನೆ. ಆದರೆ, ಯುವತಿಯೇ ಜಾಲಕ್ಕೆ ಬೆಂಬಲಿಗಳಾಗಿರುವುದರಿಂದ ನಿರಾಶನಾಗಿ, “ಇನ್ನು ಏನೂ ಬೇಡ” ಎಂದು ಆಡಿಯೋ ರೆಕಾರ್ಡ್ ಮಾಡಿ, ಸಿದ್ಧಾಪುರದ ಕಾನೆಹಳ್ಳಿ ಬಳಿಯ ದೂಪದಕಾನು ಅರಣ್ಯದಲ್ಲಿ ಅಕೇಶಿಯಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪವೇನು?
ಸಂತೋಷ್ ತನ್ನ ವಿಡಿಯೋ ಮತ್ತು ಆಡಿಯೋದಲ್ಲಿ ಸಿದ್ಧಾಪುರದ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾನೆ. ಆರೋಪಿಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ಮೃತ ಸಂತೋಷ್‌ನ ತಂದೆ ಗಣಪತಿ, ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಸಂತೋಷ್ ಸಿದ್ಧಾಪುರದ ಅಪೇಕ್ಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿಸಿದ್ದಾರೆ. ಆದರೆ, ಚರಣ್, ಲೋಕೇಶ್, ಮನೋಜ್ ಮತ್ತು ಇತರ ನಾಲ್ವರು ಆತನ ಮನೆಗೆ ಬಂದು ಕೊಲೆ ಬೆದರಿಕೆ ಹಾಕಿದ್ದರು. ಯುವತಿಯನ್ನು ಪ್ರೀತಿಸಿದರೆ ಕೊಲೆ ಮಾಡುವುದಾಗಿ ಧಮಕಿ, ಬೇರೆಡೆ ಹೋಗಿ ಸಾಯಲು ದುಷ್ಪ್ರೇರಣೆ ನೀಡಿದ್ದರು. ಆರೋಪಿಗಳು ತನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಗಣಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಒತ್ತಡದಿಂದ ಭಯಭೀತನಾದ ಸಂತೋಷ್ ಊಟವನ್ನೂ ಸೇವಿಸದೆ, ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.