ಶಿವಮೊಗ್ಗ: ನಗರದ ಮಲವಗೊಪ್ಪ ಬಳಿ ಬೈಕ್-ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ದುಮ್ಮಳ್ಳಿ-ಶಿವಪುರ ತಾಂಡದ ನಿವಾಸಿ ಕವಿತಾ (26) ಎಂದು ಗುರುತಿಸಲಾಗಿದೆ. ಇದೇ ತಿಂಗಳ 24-25ರಂದು ಯುವತಿಗೆ ಅವರ ಮದುವೆ ನಿಶ್ಚಯವಾಗಿತ್ತು.
ಮೃತ ಕವಿತಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರಿಗೆ ನೀಡಲು ಸಹೋದರ ಸಂತೋಷ್ ಜೊತೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಲವಗೊಪ್ಪ ಬಳಿ ರಾಂಗ್ ರೂಟ್‌ನಲ್ಲಿ ಬಂದ ಇನ್ನೊಂದು ಬೈಕ್‌ಗೆ ಕವಿತಾ ಮತ್ತು ಸಂತೋಷ್ ಇದ್ದ ಬೈಕ್‌ನ ಹ್ಯಾಂಡಲ್ ತಗುಲಿದೆ. ಇದರಿಂದ ನಿಯಂತ್ರಣ ತಪ್ಪಿದ ಕವಿತಾ ರಸ್ತೆಯ ಬಲಭಾಗಕ್ಕೆ ಬಿದ್ದಿದ್ದಾರೆ. ರಸ್ತೆಯ ಮೇಲೆ ಬೀಳುತ್ತಿದ್ದಂತೆಯೇ ಸಿಟಿ ಬಸ್ ಒಂದು ಕವಿತಾ ಮೇಲೆ ಹರಿದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.
ಯುವತಿಯ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯ ಕುರಿತು ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





