ಶಿವಮೊಗ್ಗ, ಏ.18: ರಾಜ್ಯದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದ ಸಿಇಟಿ ಪರೀಕ್ಷೆ ಬರೆಯುವ ವೇಳೆ ‘ಜನಿವಾರ’ ತೊಟ್ಟಿದ್ದ ಕೆಲವರೆಗೆ ಅಧಿಕಾರಿಗಳ ವರ್ತನೆ ಭಾರೀ ವಿವಾದಕ್ಕೀಡಾಗಿದೆ. ಬೀದರ್ ಮತ್ತು ಶಿವಮೊಗ್ಗದಲ್ಲಿ ಈ ಸಂಬಂಧ ನಡೆದ ಘಟನೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ.
ಬೀದರ್‌ನಲ್ಲಿ ಕನಸು ಕಪ್ಪುಕತ್ತಲಿಗೆ
ಬೀದರ್‌ನ ಸಾಯಿಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ಸುಚಿವ್ರತ್ ಕುಲಕರ್ಣಿ ಎಂಬ ವಿದ್ಯಾರ್ಥಿ, ಗಣಿತ ಪರೀಕ್ಷೆ ಬರೆಯಲು ಬಂದಾಗ ಜನಿವಾರ ತೆಗೆಯುವಂತೆ ಅಧಿಕಾರಿಗಳು ಸೂಚಿಸಿದರು. ಧಾರ್ಮಿಕ ಕಾರಣದಿಂದಾಗಿ ಕುಟುಂಬದವರು ತೆಗೆಯಬಾರದು ಎಂದಿದ್ದರು, ಆದ್ದರಿಂದ ವಿದ್ಯಾರ್ಥಿ ಜನಿವಾರ ತೆಗೆಯಲು ನಿರಾಕರಿಸಿದ. ಪೋಷಕರು ಸ್ಥಳದಲ್ಲಿಲ್ಲದ ಕಾರಣ ಟೆಲಿಫೋನ್ ಮೂಲಕ ವಿಚಾರಿಸಿ ತಮ್ಮ ನಿರ್ಧಾರ ತಿಳಿಸಿದ್ದರು. ಇದನ್ನು ಅಧಿಕಾರಿಗಳಿಗೆ ತಿಳಿಸಿದರೂ, ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಗಣಿತ ಪರೀಕ್ಷೆಯಿಂದ ಹೊರಗುಳಿದ ಈ ವಿದ್ಯಾರ್ಥಿಗೆ, ಮಧ್ಯಾಹ್ನದ ಜೀವಶಾಸ್ತ್ರ ಪರೀಕ್ಷೆಗೆ ಮಾತ್ರ ಅವಕಾಶ ನೀಡಲಾಗಿದೆ.
ವಿದ್ಯಾರ್ಥಿ ‘ಇದೆಂಥ ನ್ಯಾಯ.. ಸರ್?’ ಎಂದು ಕೇಳಿದಾಗ ಅಧಿಕಾರಿಗಳು, ‘ಅದನ್ನು ಬಳಸಿ ನೀನು ಪರೀಕ್ಷಾ ಕೇಂದ್ರದಲ್ಲಿ ನೇಣು ಹಾಕಿಕೊಂಡರೆ ಹೇಗೆ?’ ಎಂದು ಪ್ರಶ್ನಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿದ
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಬುಧವಾರ ಈ ರೀತಿಯ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬನು ಜನಿವಾರ ತೆಗೆದು ಹಾಕಲು ನಿರಾಕರಿಸಿದ್ದಕ್ಕೆ, ಸಿಬ್ಬಂದಿಯೊಬ್ಬರು ಆತನ ಜನಿವಾರ ಕತ್ತರಿಸಿ ಪರೀಕ್ಷೆಗೆ ಬಿಟ್ಟಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಈ ಘಟನೆಗೆ ಪ್ರತಿಸ್ಪಂದನವಾಗಿ ಬ್ರಾಹ್ಮಣ ಸಮಾಜದ ಮುಖಂಡರು ಮತ್ತು ಸಂಘಟನೆಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ವರ್ತನೆ ಖಂಡಿಸಿದರು. ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟವು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿ, ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿತು. ಜಿಲ್ಲಾಧಿಕಾರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.
ಪರೀಕ್ಷಾ ಭದ್ರತೆಗಾಗಿ ವಿಧಿಸಲಾಗಿರುವ ನಿಯಮಗಳು ಮತ್ತು ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ. ಕೆಲವೊಮ್ಮೆ ಭದ್ರತಾ ಕ್ರಮಗಳು ಅತಿರೇಕಕ್ಕೆ ಹೋಗುವಾಗ, ನಿರಪರಾಧ ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಪರಿಣಾಮ ಬೀರುತ್ತದೆ.
ಈ ಘಟನೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಭದ್ರತೆಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇನ್ನೊಬ್ಬರು ಧಾರ್ಮಿಕ ನಂಬಿಕೆಗೆ ಅವಮಾನವಾದರೆ ಅದು ಸಂವಿಧಾನಬಾಹಿರ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ.