20 ಕೋಟಿ ರೂ. ಕೊಟ್ಟಿದ್ದಾರೆ ಎಂಬುದೆಲ್ಲ ಶುದ್ಧ ಸುಳ್ಳು: ರೇಣುಕಾಸ್ವಾಮಿ ತಂದೆ

ಸುಪ್ರೀಂ ಕೋರ್ಟ್ ತೀರ್ಪಿಗೆ ಕುಟುಂಬದ ಸಂತಸ!

1 (25)

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಜನರ ಜಾಮೀನು ಸುಪ್ರೀಂ ಕೋರ್ಟ್‌ನಿಂದ ರದ್ದಾಗಿದೆ. ಈ ತೀರ್ಪಿನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯದ ಮೇಲಿನ ನಂಬಿಕೆ ದೃಢವಾಗಿದೆ. ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವದಂತಿಗಳ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಖಡಕ್ ಆಗಿ ಹೇಳಿದ್ದಾರೆ.

ಕಾಶಿನಾಥಯ್ಯ ಅವರು, ತಾವು ದರ್ಶನ್ ಕಡೆಯವರಿಂದ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಫೇಸ್‌ಬುಕ್‌ನಲ್ಲಿ ಏನೇನೋ ಬರೆಯುತ್ತಾರೆ. 10 ಕೋಟಿ, 20 ಕೋಟಿ ಕೊಟ್ಟರು ಎಂಬುದೆಲ್ಲ ಶುದ್ಧ ಸುಳ್ಳು. ನಾವು ಯಾರ ಬಳಿಯೂ ದುಡ್ಡು ಕೇಳಿಲ್ಲ, ಯಾರೂ ಕೊಡಲು ಬಂದಿಲ್ಲ. ಇಂತಹ ಸುಳ್ಳು ಸುದ್ದಿಗಳಿಂದ ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಾಮಾಜಿಕ ಜಾಲತಾಣಗಳಲ್ಲಿ ಸತ್ಯವಾದ ವಿಷಯಗಳನ್ನು ಮಾತ್ರ ಬರೆಯಿರಿ. ಅಂತೆ-ಕಂತೆ ವದಂತಿಗಳಿಂದ ಜನರ ದಿಕ್ಕು ತಪ್ಪಿಸಬೇಡಿ. ಈ ರೀತಿಯ ಸುದ್ದಿಗಳಿಂದ ನಮ್ಮ ಮನಸ್ಸಿಗೆ ನೋವಾಗುತ್ತದೆ, ಜನರಿಗೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ,” ಎಂದು ಕಾಶಿನಾಥಯ್ಯ ಕೈಮುಗಿದು ಮನವಿ ಮಾಡಿದ್ದಾರೆ. “ಫೇಸ್‌ಬುಕ್ ಈಗ ಫೇಕ್‌ಬುಕ್ ಆಗಿದೆ. ದರ್ಶನ್ ಅಭಿಮಾನಿಗಳು ಸತ್ಯವನ್ನು ಮಾತ್ರ ಮಾತನಾಡಬೇಕು,” ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಮಾತನಾಡಿದ ಕಾಶಿನಾಥಯ್ಯ, “ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕಾಗ ನಮಗೆ ಆತಂಕವಾಗಿತ್ತು. ಆದರೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಈಗ ಜಾಮೀನು ರದ್ದಾಗಿದ್ದು, ಯಾವುದೇ ಅಪರಾಧಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಕುಟುಂಬವು ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಈ ತೀರ್ಪು ಅವರಿಗೆ ಧೈರ್ಯ ತುಂಬಿದೆ. “ಆರೋಪಿಗಳಿಗೆ ಖಂಡಿತಾ ಶಿಕ್ಷೆಯಾಗಲಿದೆ,” ಎಂದು ಕಾಶಿನಾಥಯ್ಯ ಅವರು ನಂಬಿಕೆಯಿಂದ ಹೇಳಿದ್ದಾರೆ.

Exit mobile version