ತುರ್ತು ಲ್ಯಾಂಡಿಂಗ್ ವೇಳೆ ವಿಮಾನ ಪತನ: ಇಬ್ಬರ ಸಾವು, ಒಬ್ಬರಿಗೆ ಗಂಭೀರ ಗಾಯ

Untitled design (57)

ಅಮೆರಿಕಾ ಅಕ್ಟೋಬರ್ 13 : ಅಮೆರಿಕಾದ ಮೆಸಾಚುಸೆಟ್ಸ್ ರಾಜ್ಯದಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ಸಣ್ಣ ವಿಮಾನ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ವಿಮಾನ ಪತನದ ನಂತರ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ವಿಮಾನ ಹೊತ್ತಿ ಉರಿದಿದ್ದು, ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ವಿಮಾನ ಪತನ ಘಟನೆ ಮೆಸಾಚುಸೆಟ್ಸ್‌ನ ಇಂಟರ್‌ಸ್ಟೇಟ್-195 (I-195) ಹೆದ್ದಾರಿಯ ಸಮೀಪದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ವಿಮಾನವು ರೋಡ್ ಐಲ್ಯಾಂಡ್ ಪ್ರಾಂತ್ಯದ ವಾಯುಪ್ರದೇಶದಲ್ಲಿ ಹಾರಾಟದಲ್ಲಿದ್ದ ವೇಳೆ ತಾಂತ್ರಿಕ ದೋಷ ಉಂಟಾದ್ದರಿಂದ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾನೆ. ಕಂಟ್ರೋಲ್ ಟವರ್‌ಗೆ ತಕ್ಷಣ ಸಂಪರ್ಕಿಸಿ ಸಮೀಪದ ಬೆಡ್‌ಫೋರ್ಡ್ ರೀಜನಲ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲು ಅನುಮತಿ ಕೋರಲಾಗಿತ್ತು. ಆದರೆ ವಿಮಾನದ ಎಂಜಿನ್‌ನಲ್ಲಿ ಉಂಟಾದ ಸಮಸ್ಯೆಯಿಂದಾಗಿ ಲ್ಯಾಂಡಿಂಗ್ ಸಾಧ್ಯವಾಗದೆ, ಅಂತಿಮ ಕ್ಷಣದಲ್ಲಿ ಪೈಲಟ್ ಹೆದ್ದಾರಿಯ ಮೇಲೆ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿದೆ.

ಪತನದ ತೀವ್ರತೆಗೆ ವಿಮಾನ ತಕ್ಷಣ ಬೆಂಕಿಗಾಹುತಿಯಾಗಿದ್ದು, ಸುತ್ತಮುತ್ತಲಿನ ವಾಹನಗಳು ಮತ್ತು ಹೆದ್ದಾರಿ ಸಂಚಾರಕ್ಕೂ ಅಪಾಯ ಉಂಟಾಯಿತು. ಆದರೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ತುರ್ತು ವೈದ್ಯಕೀಯ ತಂಡಗಳು ತಕ್ಷಣ ಸ್ಥಳಕ್ಕೆ ತೆರಳಿ ಅಗ್ನಿಯನ್ನು ನಿಯಂತ್ರಣಕ್ಕೆ ತಂದರು.

Exit mobile version