ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಮಿಯ ಸಮೀಕ್ಷೆಗೆ ತೆರಳಿದ್ದ ಜಂಟಿ ಮಾಪನ ಸಮಿತಿ (JMC) ಅಧಿಕಾರಿಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರು ಮಂದಿ ರೈತರಿಗೆ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ರೈತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಡಲಹಳ್ಳಿ ಗ್ರಾಮದ ಎಚ್.ಆರ್. ನಾಗರಾಜು, ಕೋಡಿಹಳ್ಳಿ ಗ್ರಾಮದ ಜಯಮ್ಮ ಸೇರಿದಂತೆ ಆರು ಮಂದಿ ರೈತರು ತಮ್ಮ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಮುಂದಿನ ವಿಚಾರಣೆಯವರೆಗೆ ಪ್ರಕರಣದ ತನಿಖೆ ಮುಂದುವರಿಸದಂತೆ ಪೊಲೀಸರಿಗೆ ಸೂಚಿಸಿದೆ.
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ಜಂಟಿ ಮಾಪನ ನಡೆಸಲು ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದ್ದು, ಬಳಿಕ ಪೊರಕೆಯಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಆರು ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ ಎಫ್‌ಐಆರ್ ದಾಖಲಾದ ರೀತಿಯ ಬಗ್ಗೆ ಹೈಕೋರ್ಟ್ ಪೀಠ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ದೂರು ನೀಡಿರುವ ವ್ಯಕ್ತಿ ಜಂಟಿ ಮಾಪನ ಸಮಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದ ಬಾಡಿಗೆ ಕಾರಿನ ಚಾಲಕರಾಗಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿರುವ ವ್ಯಕ್ತಿ ಸ್ವತಃ ದೂರು ದಾಖಲಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.
ದೂರು ದಾಖಲಿಸಿದ ವ್ಯಕ್ತಿಯ ಪಾತ್ರ ಹಾಗೂ ಪ್ರಕರಣ ದಾಖಲಾದ ವಿಧಾನವನ್ನು ಗಮನಿಸಿದರೆ ಪ್ರಕರಣದ ದಾಖಲಾತಿಯಲ್ಲೇ ಅನುಮಾನಾಸ್ಪದ ಅಂಶಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆ ಅರ್ಜಿಯ ಮುಂದಿನ ವಿಚಾರಣೆ ನಡೆಯುವವರೆಗೆ ಆರು ರೈತರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.
