ರಾಮನಗರ: ಬೆಂಗಳೂರಿನ ರೌಡಿಶೀಟರ್‌ನನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಸಮೀಪ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯ ಬಳಿಕ ಆರೋಪಿಗಳು ಎರಡು ಕಾರುಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ..
ಹತ್ಯೆಯಾದ ವ್ಯಕ್ತಿಯನ್ನು ವೆಂಕಟೇಶ್ ಅಲಿಯಾಸ್ ಬುಜ್ಜಿ (48) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಅರಕೆರೆ ನಿವಾಸಿಯಾಗಿದ್ದು, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದರು. ವೆಂಕಟೇಶ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆ, ಈ ಹತ್ಯೆಗೆ ಹಳೆ ವೈಷಮ್ಯ ಅಥವಾ ಗ್ಯಾಂಗ್ ವೈಮನಸ್ಸಿನ ಕಾರಣವಿರಬಹುದೆಂದು ಅನುಮಾನಗಳು ವ್ಯಕ್ತವಾಗಿವೆ.
ಮಾಹಿತಿಯ ಪ್ರಕಾರ, ವೆಂಕಟೇಶ್ ಭಾನುವಾರ ತನ್ನ ಕೆಲ ಸ್ನೇಹಿತರೊಂದಿಗೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ಬಳಿ ಇರುವ ತನ್ನ ಜಮೀನಿಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಚಲನವಲನ ಗಮನಿಸಿದ್ದ ದುಷ್ಕರ್ಮಿಗಳು ಎರಡು ಕಾರುಗಳಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ.
ವೆಂಕಟೇಶ್ ಇದ್ದ ಸ್ಥಳಕ್ಕೆ ಬಂದ ತಕ್ಷಣವೇ ಆರೋಪಿಗಳು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಯಿಂದ ವೆಂಕಟೇಶ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದು, ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ನಡೆದ ಕ್ಷಣರ್ಧದಲ್ಲೇ ಆ ಸ್ಥಳದಿಂದ ಸ್ನೇಹಿತರು ಪ್ರಾಣಭಯದಿಂದ ಓಡಿಹೋಗಿದ್ದಾರೆ ಎನ್ನಲಾಗಿದೆ.
ಹತ್ಯೆಯ ಬಳಿಕ ಆರೋಪಿಗಳು ಯಾವುದೇ ಸುಳಿವು ಬಿಟ್ಟುಕೊಡದೆ ಎರಡು ಕಾರುಗಳಲ್ಲಿ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸಾತನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳು ಬಂದಿದ್ದ ವಾಹನಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹಳೆಯ ದ್ವೇಷ, ಗ್ಯಾಂಗ್ ವೈಮನಸ್ಸು ಅಥವಾ ವೈಯಕ್ತಿಕ ಕಾರಣಗಳಿಂದ ಈ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
