ಬೆಂಗಳೂರು: ಸಹಕಾರ ಇಲಾಖೆ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವ ವಿಚಾರವು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯವಾಗಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಯಾಕೆ ವಜಾ ಮಾಡಲಾಯಿತು ಎಂಬ ಕಾರಣಗಳ ಬಗ್ಗೆ ಸರ್ಕಾರದಿಂದ ಸೂಕ್ತ ಉತ್ತರ ಬಂದಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಈಗಾಗಲೇ ಈ ವಿಷಯಕ್ಕೆ ಉತ್ತರ ನೀಡಲಾಗಿದ್ದು, ಮತ್ತೆ ಪ್ರಸ್ತಾಪಿಸುವುದರಲ್ಲಿ ಅರ್ಥವಿಲ್ಲ ಎಂದು ಸಭಾನಾಯಕ ಬೋಸ್ ರಾಜ್ ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ವಿಷಯದ ಬಗ್ಗೆ ಸಭಾನಾಯಕರು ಉತ್ತರಿಸಿದ್ದಾರೆ. ಇದನ್ನು ಚರ್ಚಿಸುವ ಅಗತ್ಯವಿಲ್ಲ ಎಂದು ರೂಲಿಂಗ್ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವ ಮೂಲಕ ದಲಿತ ನಾಯಕನನ್ನು ತುಳಿದಿದ್ದೀರಿ. ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದು ನಿಮ್ಮ ಸಂಸ್ಕೃತಿ. ನಿಮಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೆಲಸಕ್ಕೆ ಬಾರದ ವಿಚಾರಗಳನ್ನು ಯಾಕೆ ಮಾತನಾಡುತ್ತೀರಿ? ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ, ಬಸವರಾಜ ಯತ್ನಾಳ್‌ನ್ನು ಉಚ್ಛಾಟನೆ ಮಾಡಿದಾಗ ನೀವು ಉತ್ತರ ಕೊಟ್ಟರಾ? ಎಂದು ಪ್ರಶ್ನಿಸಿದರು. ಇದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿ ಸಿದ್ದರಾಮಯ್ಯ ಸದನದಿಂದ ನಿರ್ಗಮಿಸಿದರು.