ಚಿತ್ರದುರ್ಗ: ಅಧ್ಯಾಪಕನೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಹರಡಲಾದ ಸುಳ್ಳು ಅಪಪ್ರಚಾರಕ್ಕೆ ಮನನೊಂದ ಬಿಎಎಂಎಸ್ (BAMS) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ.
ಘಟನೆಯ ವಿವರ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಬಸವ ಲೇಔಟ್‌ನಲ್ಲಿ ವಾಸವಿದ್ದ 23 ವರ್ಷದ ನಿಖಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬಿಎಎಂಎಸ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ. ಬುಧವಾರ ರಾತ್ರಿ ತನ್ನ ನಿವಾಸದಲ್ಲಿ ನಿಖಿತಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಶ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಸಾವಿಗೆ ನಿಖರ ಕಾರಣಗಳನ್ನ ತಿಳಿಸಲಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ ?
ನಿಖಿತಾ ಸಾವಿಗೂ ಮುನ್ನ ಬರೆದಿದ್ದ ಎಂಟು ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಮೇಲಾಗಿದ್ದ ಮಾನಸಿಕ ಕಿರುಕುಳದ ಬಗ್ಗೆ ತಿಳಿಸಿದ್ದಾಳೆ. ಕಾಲೇಜಿನ ಅಧ್ಯಾಪಕ ಡಾ.ರಾಜು ಎಂಬುವವರ ಜೊತೆ ತನಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಅಪಪ್ರಚಾರದಿಂದ ತನ್ನ ಘನತೆಗೆ ಧಕ್ಕೆ ಬಂದಿದೆ ಮತ್ತು ಮಾನಸಿಕವಾಗಿ ಜರ್ಜರಿತಗೊಂಡಿದ್ದೇನೆ ಎಂದು ಅವಳು ಬರೆದುಕೊಂಡಿದ್ದಾರೆ.
ಡೆತ್‌ನೋಟ್‌ನಲ್ಲಿ ಪ್ರಮುಖವಾಗಿ ಅಧ್ಯಾಪಕ ಡಾ.ರಾಜು, ಅವರ ಪತ್ನಿ ನಿಶಾ ಹಾಗೂ ಕಾಲೇಜಿನ ಕೆಲವು ಸಹಪಾಠಿ ವಿದ್ಯಾರ್ಥಿನಿಯರ ಹೆಸರುಗಳನ್ನು ಬರೆಯಲಾಗಿದೆ. ಇವರೆಲ್ಲರೂ ಸೇರಿ ತನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ನಿಖಿತಾ ಆರೋಪಿಸಿದ್ದಾಳೆ.
ಘಟನೆ ತಿಳಿಯುತ್ತಿದ್ದಂತೆಯೇ ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಿಖಿತಾ ಪೋಷಕರ ದೂರಿನ ಮೇರೆಗೆ ಹಾಗೂ ಡೆತ್‌ನೋಟ್‌ನಲ್ಲಿರುವ ಸಾಕ್ಷ್ಯಗಳ ಆಧಾರದ ಮೇಲೆ ಅಧ್ಯಾಪಕ ರಾಜು, ಆತನ ಪತ್ನಿ ನಿಶಾ ಮತ್ತು ಕೆಲವು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ನನ್ನ ಮಗಳು ಕಷ್ಟಪಟ್ಟು ಓದುತ್ತಿದ್ದಳು, ಆದರೆ ಈ ಸುಳ್ಳು ಅಪವಾದಗಳು ಆಕೆಯನ್ನು ಬಲಿ ಪಡೆದವು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.





