ರಾಯಚೂರು: ಅಡುಗೆ ಸರಿಯಿಲ್ಲ ಅಂದಿದ್ದೇ ತಪ್ಪಾ? ತವರುಮನೆಯವರನ್ನ ಕರೆಸಿ ಗಂಡನ ಮೇಲೆ ಹಲ್ಲೆ

BeFunky collage (91)

ಯಾವುದಕ್ಕೂ ಕೊರತೆ ಇಲ್ಲದ ಸುಂದರ ಸಂಸಾರವೊಂದು ಕ್ಷುಲ್ಲಕ ಕಾರಣಕ್ಕೆ ರಣರಂಗವಾಗಿ ಪರಿವರ್ತನೆಗೊಂಡಿದೆ. ಬ್ಯಾಂಕ್ ಉದ್ಯೋಗಿ ಗಂಡ ಮತ್ತು ಕೃಷಿ ಇಲಾಖೆ ಅಧಿಕಾರಿ ಹೆಂಡತಿ ನಡುವಿನ ಅಡುಗೆ ಮನೆಯ ಸಣ್ಣ ಜಗಳವು ಇಡೀ ಕುಟುಂಬವನ್ನೇ ಆಸ್ಪತ್ರೆಗೆ ತಳ್ಳಿದೆ.

ಘಟನೆ ವಿವರ?

ರಾಯಚೂರಿನ ಹೊಸೂರು ರಸ್ತೆಯಲ್ಲಿ ವಾಸಿಸುತ್ತಿರುವ ಬ್ಯಾಂಕ್ ಉದ್ಯೋಗಿ ಶಿವರಾಜ್ ಮತ್ತು ಅವರ ಪತ್ನಿ ಶೋಭಾ (ಕೃಷಿ ಇಲಾಖೆ ಅಧಿಕಾರಿ) ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಷಯಗಳಲ್ಲಿ ಜಗಳವಾಗುತ್ತಿತ್ತು. ಇತ್ತೀಚೆಗೆ ಶಿವರಾಜ್ ಅವರು ಹೆಂಡತಿಯನ್ನು “ಅಡುಗೆ ಸರಿಯಾಗಿ ಮಾಡುವುದಿಲ್ಲ” ಎಂದು ಕಿರುಕುಳ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಮಾತಿಗೆ ಕೆರಳಿದ ಶೋಭಾ ತಕ್ಷಣವೇ ತವರು ಮನೆಯವರಿಗೆ ಫೋನ್ ಮಾಡಿ ಕರೆದಿದ್ದಾರೆ. ಆವೇಶದಿಂದ ಬಂದ ಬೀಗರು ಶಿವರಾಜ್ ಮನೆಗೆ ನುಗ್ಗಿ ಭೀಕರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಲ್ಲಿ ಶಿವರಾಜ್ ಅವರ ವಯಸ್ಸಾದ ತಂದೆ ದೇವಿಂದ್ರಪ್ಪ ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶಿವರಾಜ್, ಅವರ ತಾಯಿ ಲಕ್ಷ್ಮಿ ಮತ್ತು ಸಹೋದರ ವೆಂಕಟೇಶ್ ಕೂಡಾ ಗಾಯಗೊಂಡಿದ್ದಾರೆ.

ಪೊಲೀಸ್ ಕ್ರಮ:

ಘಟನೆಯ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿ ಶೋಭಾ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು: ಶೋಭಾ, ರಂಜಿತ್ ಕುಮಾರ್, ತಾಯಣ್ಣಗೌಡ, ಅಕ್ಷಯ್ ಕುಮಾರ್ ಮತ್ತು ಈರಣ್ಣಗೌಡ.

ಒಂದು ಹೊತ್ತಿನ ಅಡುಗೆಯ ಜಗಳವು ಇಡೀ ಕುಟುಂಬವನ್ನು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿಸಿದೆ. ಸುಶಿಕ್ಷಿತ ದಂಪತಿಗಳ ನಡುವಿನ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

Exit mobile version