ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ವಿದ್ಯಾರ್ಥಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೆರವು

Untitled design 2025 04 09t215758.400

ಬೆಳಗಾವಿ : ಗೃಹ ಲಕ್ಷ್ಮೀ ಹಣದ ಸಹಾಯದಿಂದ ಓದಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ ಪಡೆದಿರುವ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಪೃಥ್ವಿ ಹೋಳಿ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ನೆರವಾಗಿದ್ದಾರೆ.

ಇತಿಹಾಸ ವಿಭಾಗದಲ್ಲಿ 100ಕ್ಕೆ 100 ಅಂಕ ಪಡೆದಿರುವ ಪೃಥ್ವಿ ಹೋಳಿ ಅವರ ಓದಿಗೆ ತಮ್ಮ ತಾಯಿ ಅವರಿಗೆ ಬರುತ್ತಿದ್ದ ಗೃಹ ಲಕ್ಷ್ಮೀ ಯೋಜನೆಯ ಹಣ ನೆರವಾಯಿತು. ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂದು ಕನಸುಕಂಡಿರುವೆ ಎಂದು ಹೇಳಿಕೊಂಡಿದ್ದರು. ವಿದ್ಯಾರ್ಥಿನಿಯ ಕನಸನ್ನು ಮಾಧ್ಯಮಗಳ ಮೂಲಕ ಗಮನಿಸಿದ ಸಚಿವರು, ಇದೀಗ ವಿದ್ಯಾರ್ಥಿನಿ ಪೃಥ್ವಿ ಹೋಳಿ ಅವರ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ತಕ್ಷಣವೇ ತರಬೇತಿ ಕೇಂದ್ರಕ್ಕೆ ಶಿಫಾರಸು ಮಾಡಿದ ಸಚಿವರು

ವಿದ್ಯಾರ್ಥಿನಿಗೆ ಉಚಿತ ತರಬೇತಿ ನೀಡಬೇಕು, ಆಕೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಸಚಿವರು ಧಾರವಾಡದ ಕ್ಲಾಸಿಕ್ ಕೆಎಎಸ್ ಮತ್ತು ಸ್ಟಡಿ ಸರ್ಕಲ್‌ಗೆ ಶಿಫಾರಸು ಮಾಡಿದ್ದಾರೆ. ವಿದ್ಯಾರ್ಥಿನಿ ಪೃಥ್ವಿ ಹೋಳಿ ಅವರಿಗೆ ಐಪಿಎಸ್ ಸೇರಿದಂತೆ ಯುಪಿಎಸ್‌ಸಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.

ಸಚಿವರ ಶಿಫಾರಸ್ಸಿನ ಮೇರೆಗೆ ಐಪಿಎಸ್ ಹಾಗೂ ಯುಪಿಎಸ್ಸಿ ಪರೀಕ್ಷೆಗಳ ತರಬೇತಿಯನ್ನು ವಿದ್ಯಾರ್ಥಿನಿ ಪೃಥ್ವಿ ಹೋಳಿ ಅವರಿಗೆ ಕೊಡಲು ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕ್ಲಾಸಿಕ್ ಸ್ಟಡಿ ಸೆಂಟರ್‌ನ ಲಕ್ಷ್ಮಣ ಎಸ್ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವರಿಗೆ ಧನ್ಯವಾದ ಅರ್ಪಿಸಿದ ವಿದ್ಯಾರ್ಥಿನಿ

ಕಳೆದ ಎರಡು ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡರು. ನನ್ನ ತಾಯಿಗೆ ಬರುತ್ತಿರುವ ಗೃಹ ಲಕ್ಷ್ಮೀ ಯೋಜನೆಯ ಹಣ ನನಗೆ ವಿದ್ಯಾಭ್ಯಾಸಕ್ಕೆ ನೆರವಾಯಿತು. ಮುಂದಿನ ದಿನಗಳಲ್ಲಿ ಐಪಿಎಸ್ ಮಾಡುವ ಕನಸುಹೊಂದಿದ್ದೇನೆ. ನಾನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ. ಸಚಿವರಿಗೆ ನಾನು ಮತ್ತು ನನ್ನ ತಾಯಿ ಅನಂತ ಅನಂತ ವಂದನೆಗಳನ್ನು ಸಲ್ಲಿಸುತ್ತೇವೆ ಎಂದು ಬಾಲಕಿ ತಿಳಿಸಿದ್ದಾಳೆ.

Exit mobile version