ಬೆಂಗಳೂರಿನಲ್ಲಿ ಬಿತ್ತು ಶಾಸಕ ಪ್ರಭು ಚವಾಣ್ ಪುತ್ರನ ವಿರುದ್ಧ ಮತ್ತೊಂದು ಎಫ್ಐಆರ್!

ಲೈಂಗಿಕ ದೌರ್ಜನ್ಯ ಆರೋಪ: ಪ್ರತೀಕ್ ಚವಾಣ್ ವಿರುದ್ಧ 2ನೇ ಎಫ್‌ಐಆರ್!

Untitled design 2025 08 17t104521.440

ಬೆಂಗಳೂರು: ಔರಾದ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಅವರ ಪುತ್ರ ಪ್ರತೀಕ್ ಚವಾಣ್ ವಿರುದ್ಧ ಮದುವೆಯ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಜುಲೈ 20ರಂದು ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಇದೇ ಆರೋಪದಡಿ ಪ್ರತೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಂತ್ರಸ್ತೆಯ ದೂರಿನ ಪ್ರಕಾರ, ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಹೋಟೆಲ್‌ವೊಂದರಲ್ಲಿ ಪ್ರತೀಕ್ ಚವಾಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಬೀದರ್‌ನಿಂದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ. ಮಹಾರಾಷ್ಟ್ರದ ಉದಗೀರ್‌ನ ಹಣೆಗಾಂವ್ ತಾಂಡಾದ ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಈ ಎಫ್‌ಐಆರ್ ದಾಖಲಾಗಿದೆ.

2023ರ ಡಿಸೆಂಬರ್ 25ರಂದು ಔರಾದ ತಾಲೂಕಿನ ಘಮಸುಬಾಯಿ ಬೊಂತಿ ತಾಂಡಾದಲ್ಲಿ ಹಿರಿಯರ ಸಮ್ಮುಖದಲ್ಲಿ ಪ್ರತೀಕ್ ಚವಾಣ್ ಜತೆ ಸಂತ್ರಸ್ತೆಯ ನಿಶ್ಚಿತಾರ್ಥ ನಡೆದಿತ್ತು. ನಂತರ ಇಬ್ಬರೂ ವಿವಿಧ ಸ್ಥಳಗಳಿಗೆ ಒಟ್ಟಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರತೀಕ್ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಮೋಸ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗೆ ಮನವಿ:

ಪ್ರಕರಣ ದಾಖಲಾಗುವ ಮುನ್ನ ಸಂತ್ರಸ್ತೆ ಮತ್ತು ಅವರ ತಾಯಿ ಆಗಸ್ಟ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸರು ಈಗ ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version