ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಶುಕ್ರವಾರ (ಜುಲೈ 25) ತೀರ್ಪನ್ನು ಕಾಯ್ದಿರಿಸಿದೆ. ಕರ್ನಾಟಕ ಹೈಕೋರ್ಟ್‌ನ ಸೂಚನೆಯಂತೆ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಕೋರಿದ್ದಾರೆ.
ಗುರುವಾರ ನಡೆದ ವಿಚಾರಣೆಯಲ್ಲಿ ಸಿಐಡಿಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು. ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿ, “ಪ್ರಜ್ವಲ್ ಬಂಧನವಾಗಿ 14 ತಿಂಗಳು ಕಳೆದಿವೆ. ಈ ಪ್ರಕರಣದಲ್ಲಿ ಸಹ-ಆರೋಪಿಯಾದ ಎಚ್.ಡಿ. ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ, ಪ್ರಜ್ವಲ್‌ಗೂ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.
ಪ್ರಜ್ವಲ್ ರೇವಣ್ಣ ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಮೊದಲ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್, ಮತ್ತು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದವು. ಇದಾದ ಬಳಿಕ, ಜೂನ್ 2025 ರಲ್ಲಿ ಪ್ರಜ್ವಲ್ ಮತ್ತೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಲು ಸೂಚಿಸಿತ್ತು. ಅದರಂತೆ, ಪ್ರಜ್ವಲ್ ಎರಡನೇ ಬಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ವಕೀಲರ ನೇಮಕದಲ್ಲಿ ಸಮಸ್ಯೆ:
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಜಿ. ಅರುಣ್ ಸೇರಿದಂತೆ ಕೆಲವರು ವಕಾಲತ್ತಿನಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ, ಹೊಸ ವಕೀಲರ ನೇಮಕಕ್ಕಾಗಿ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಾಲಾವಕಾಶ ಕೋರಿದ್ದರು. ಇದಕ್ಕೂ ಮುನ್ನ, ಪ್ರಜ್ವಲ್ ಪರ ವಕೀಲರು ನ್ಯಾಯಾಧೀಶ ಗಜಾನನ ಭಟ್ ಅವರನ್ನು ವಿಚಾರಣೆಯಿಂದ ಬದಲಿಸುವಂತೆ ಕೋರಿ ಸಲ್ಲಿಸಿದ್ದ ಜ್ಞಾಪನಾ ಪತ್ರವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದರು. ಈ ಕಾರಣದಿಂದಾಗಿ ವಕೀಲ ಜಿ. ಅರುಣ್ ವಕಾಲತ್ತಿನಿಂದ ನಿವೃತ್ತಿ ಘೋಷಿಸಿದ್ದರು.