ಪಂಚಮಸಾಲಿ ಪೀಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳು ಎದ್ದುಬಂದಿವೆ. ಯುವತಿಯೊಬ್ಬರು ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ, ದೈಹಿಕ ಬಳಕೆ ಮತ್ತು ವಿಡಿಯೋ ಬ್ಲಾಕ್‌ಮೇಲ್ ಆರೋಪ ಮಾಡಿದ್ದಾರೆ.

ಸಂತ್ರಸ್ತೆ ಯುವತಿ ತನ್ನ ದೂರಿನಲ್ಲಿ, “ಸ್ವಾಮೀಜಿ ನನ್ನನ್ನು ಮಠಕ್ಕೆ ಕರೆಸಿ ‘ಪ್ರಸಾದ ಕೊಡುತ್ತೇನೆ’ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದರು. ನನ್ನ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ದೈಹಿಕವಾಗಿ ಬಳಸಿಕೊಂಡರು. ನನಗೆ ತಿಳಿಯದಂತೆ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಬಳಸಿ ಬ್ಲಾಕ್‌ಮೇಲ್ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಸಂಬಂಧವಾಗಿ ಸಂತ್ರಸ್ತೆ ಗೃಹ ಸಚಿವರು, ಮುಖ್ಯಮಂತ್ರಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಸ್ವಾಮೀಜಿ ವಿರುದ್ಧ FIR ದಾಖಲಿಸುವಂತೆ ಮನವಿ ಮಾಡಿದ್ದಾರೆ.

ವಿಜಯಾನಂದ ಕಾಶಪ್ಪನವರ್ ಹೇಳಿಕೆ: “ಸ್ವಾಮೀಜಿ ಹಲವು ಬಾರಿ ಇಂತಹ ಕೆಲಸ ಮಾಡಿದ್ದಾರೆ ಎಂದು ಹಿಂದೆಯೇ ಹಲವರು ಫೋನ್ ಮಾಡಿ ತಿಳಿಸಿದ್ದರು. ಸಮಾಜದ ದುಡ್ಡು ಬಳಸಿ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಒಂದಲ್ಲ ಎರಡಲ್ಲ, ಹಲವು ಅಕ್ರಮ ಸಂಬಂಧಗಳು ಇವೆ. ನಮ್ಮದು ಬಸವಣ್ಣನವರ ಐಕ್ಯ ಸ್ಥಳವಾದ ಪವಿತ್ರ ಪೀಠ. ಅದನ್ನು ಅಪವಿತ್ರಗೊಳಿಸಬಾರದು ಎಂದು ಮುಖಂಡರ ಗಮನಕ್ಕೆ ತಂದಿದ್ದೆವು. ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.

ಅವರಿಗೆ “ಭಕ್ತರು ಕಾವಿ ಬಸ್ತ್ರಕ್ಕೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಸ್ವಾಮೀಜಿ ಪೀಠಕ್ಕೆ ಬಂದಾಗ ಯಾವ ತತ್ತ್ವಗಳ ಮೇಲೆ ಬಂದಿದ್ದರೋ ಅವುಗಳನ್ನು ಪಾಲಿಸಿಲ್ಲ. ಬೈಲಾದಲ್ಲಿ ನಿಗದಿಪಡಿಸಿದ ಎಲ್ಲಾ ಶರತ್ತುಗಳನ್ನು ಉಲ್ಲಂಘಿಸಿದ್ದಾರೆ. ೨೦೧೭ರಿಂದಲೂ ಈ ವಿಷಯ ನಡೆಯುತ್ತಿತ್ತು. ನಮ್ಮ ಹಿರಿಯರು ಮತ್ತು ಮರ್ಯಾದೆಯನ್ನು ಹೊರಗೆ ಹಾಕದೆ ನಾವೇ ಸ್ವಾಮೀಜಿಯನ್ನು ಹೊರಗೆ ಹಾಕಿದ್ದೇವೆ” ಎಂದು ತಿಳಿಸಿದ್ದಾರೆ.

ಇದರ ಜೊತೆಗೆ, “ಈಗ ಎತ್ತಿಕೊಂಡಿರುವ ಮಿಸ್ಟರ್ ಬಸನಗೌಡ ಪಾಟೀಲ್, ಅರವಿಂದ್ ಬೆಲ್ಲದ, ಸಿಸಿ ಪಾಟೀಲ್ ಸೇರಿದಂತೆ ಅನೇಕ ನಾಯಕರು ಉತ್ತರ ಕೊಡಬೇಕು. ಅವರು ಪೀಠ ಕಟ್ಟುತ್ತೇವೆ, ಪ್ರತ್ಯೇಕ ಮಠ ಮಾಡುತ್ತೇವೆ ಎಂದಿದ್ದರು. ಈಗ ಮಾಡಿಕೊಳ್ಳಲಿ. ನಾವು ಅವರ ಸಂಬಂಧ ತೊಳೆದುಕೊಂಡಿದ್ದೇವೆ” ಎಂದು ಕಾಶಪ್ಪನವರ್ ಹೇಳಿದ್ದಾರೆ.

ಸಂತ್ರಸ್ತೆಯ ದೂರು ಬಗ್ಗೆ ಪ್ರತಿಕ್ರಿಯಿಸುತ್ತಾ, “ಅನ್ಯಾಯಕ್ಕೊಳಗಾದ ಮಹಿಳೆ ನ್ಯಾಯ ಕೇಳುವುದು ಸಹಜ. ಯಾರು ದೂರು ಸಲ್ಲಿಸಿದ್ದಾರೆ, ಯಾವಾಗ ಸಲ್ಲಿಸಿದ್ದಾರೆ, ಯಾಕೆ ಸ್ಟೇ ತಂದರು, ಚಾರಿತ್ರ್ಯ ಸ್ವಚ್ಛವಾಗಿದ್ದರೆ ಕೋರ್ಟ್‌ಗೆ ಯಾಕೆ ಹೋಗಬೇಕಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ನಮ್ಮ ಸ್ವಾಮೀಜಿ ಎಂದು ಹೊತ್ತುಕೊಂಡು ಹೋಗುತ್ತಿರುವವರು ಉತ್ತರ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಘಟನೆಯು ಪಂಚಮಸಾಲಿ ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಮತ್ತು ಪೀಠದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಮುಖಂಡರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.

Exit mobile version