ರಸಗೊಬ್ಬರ ಅಭಾವ ಹಾಗೂ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿರೋಧ ಪಕ್ಷಗಳು ದ್ವಂದ್ವ ರಾಜಕಾರಣ ಮಾಡುತ್ತಿವೆ. ಅದರಲ್ಲೂ ಜೆಡಿಎಸ್ ಅವಧಿಯಲ್ಲಿ ನಡೆದ ಟಿಕೆಟ್ ಫಿಕ್ಸಿಂಗ್ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ನಿಲುವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿದಾಗ, ‘ಬರೀ ಸಾವಯವದಿಂದ ರೈತ ಬದುಕಲು ಸಾಧ್ಯವಿಲ್ಲ’ ಎಂದು ಇದೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರೇ ಸಾವಯವ ಗೊಬ್ಬರ ಬಳಸಿ ಎಂದು ಹೇಳುತ್ತಿದ್ದಾರೆ. ಈಗ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರು ಏನು ಹೇಳುತ್ತಾರೆ? ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೋ ಅಥವಾ ಹೊಗಳುತ್ತಾರೋ ಕಾದು ನೋಡಬೇಕಿದೆ ಎಂದು ಪ್ರಶ್ನಿಸಿದ್ದಾರೆ.
ನಾನು ಕೃಷಿ ಸಚಿವನಾಗಿದ್ದಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ರೈತರಿಗೆ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೆ. ಅಧಿಕಾರಿಗಳು ಈಗಲೂ ಅದನ್ನು ಪಾಲಿಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಪಕ್ಷಗಳು ಇದನ್ನು ದೊಡ್ಡದಾಗಿ ಬಿಂಬಿಸಿ ರೈತರಲ್ಲಿ ಆತಂಕ ಸೃಷ್ಟಿಸುವುದು ಬೇಡ” ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕತ್ವ ಉಳಿಸಿಕೊಳ್ಳಲು ಆರ್. ಅಶೋಕ್ ಹೋರಾಟ
ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಕನಿಷ್ಠ 2 ರಿಂದ 3 ತಿಂಗಳು ಸಮಯ ಕೊಟ್ಟು, ನಂತರ ಟೀಕೆ ಟಿಪ್ಪಣಿ ಮಾಡುವ ರಾಜಕೀಯ ಸಂಸ್ಕಾರವಿರಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಆಡಳಿತದ ಅನುಭವ ಇಲ್ಲ ಎಂದೇನೂ ಇಲ್ಲ, ಅವರು ಈ ಹಿಂದೆ ಸಿದ್ದರಾಮಯ್ಯ ಅವರ ಜೊತೆ ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ, ಅಶೋಕ್ ಎಲ್ಲರೂ ಐದಾರು ತಿಂಗಳು ಸರ್ಕಾರಕ್ಕೆ ಸಮಯ ಕೊಡುತ್ತೇವೆ ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಒಂದು ಒಳ್ಳೆಯ ಭಾವನೆ ಬರುತ್ತಿತ್ತು. ಆದರೆ, ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನದಿಂದಲೇ ಆರ್. ಅಶೋಕ್ ಅವರು ನಾಲಿಗೆ ಹರಿಬಿಡುತ್ತಿದ್ದಾರೆ. ತಮ್ಮ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಅವರು ದಿನನಿತ್ಯ ಇಂತಹ ಪ್ರದರ್ಶನ ನೀಡುತ್ತಿದ್ದಾರೆ. ಅಶೋಕ್ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಿ ಮಾತನಾಡಿದರೆ ಒಳ್ಳೆಯದು ಎಂದು ಎಚ್ಚರಿಸಿದರು.
ಹೆಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು
“ಡಿ.ಕೆ. ಶಿವಕುಮಾರ್ ಅವರಿಗೆ 1,400 ಕೋಟಿ ರೂ. ಎಲ್ಲಿಂದ ಉದುರಿತು?” ಎಂದು ಕೇಳುತ್ತಿರುವ ಕುಮಾರಸ್ವಾಮಿ ಅವರಿಗೆ ಚಲುವರಾಯಸ್ವಾಮಿಯವರು ತಿರುಗೇಟು ನೀಡಿದ್ದಾರೆ. “ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಬ್ಯುಸಿನೆಸ್‌ಮೆನ್, ಅವರಿಗೆ ರಾಜಕಾರಣ ಒಂದು ಪ್ಯಾಶನ್ ಅಷ್ಟೇ. ಆದರೆ, ಹೆಚ್.ಡಿ. ದೇವೇಗೌಡರನ್ನು ಹೊರತುಪಡಿಸಿ ನಿಮ್ಮ ಇಡೀ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಲು ನೀವು ಸಿದ್ಧರಿದ್ದೀರಾ? ನಿಮ್ಮ ಕುಟುಂಬದಲ್ಲಿ ಎಷ್ಟು ಆಸ್ತಿ ಇದೆ, ಅದು ಎಲ್ಲಿಂದ ಬಂತು ಎಂದು ಸ್ವಯಂ ತನಿಖೆಗೆ ಒಳಪಡಿಸಿಕೊಳ್ಳಿ” ಎಂದು ಸವಾಲು ಹಾಕಿದರು.
“ನೀವು ಇದೇ ರೀತಿ ಮುಂದುವರಿದರೆ ನಿಮ್ಮ ಇಡೀ ಜಾತಕದ ದಾಖಲೆಗಳು ಡಿ.ಕೆ. ಶಿವಕುಮಾರ್ ಅವರ ಬಳಿ ಇವೆ. ಅವರು ಕೂಟ ರಾಜಕಾರಣದಲ್ಲಿ ಚಾಣಾಕ್ಯರಾಗಿದ್ದು, ಸೂಕ್ತ ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಹೊರಹಾಕಲಿದ್ದಾರೆ. ಬರೀ ಮಾತನಾಡಿಯೇ ರಾಜಕಾರಣದಲ್ಲಿ ಸಕ್ಸಸ್ ಆಗ್ತೀನಿ ಅಂದುಕೊಂಡಿದ್ದರೆ ಅದು ತಪ್ಪು, ಒಂದಲ್ಲಾ ಒಂದು ದಿನ ಇದು ಮುಕ್ತಾಯವಾಗುತ್ತದೆ. ನಿಮ್ಮ ವಿರುದ್ಧ ಹೋರಾಡುವ ಶಕ್ತಿ ಡಿಕೆಶಿಗೆ ಇಲ್ಲ ಅಂದುಕೊಳ್ಳಬೇಡಿ, ನೀವು ಏನೇನೂ ಅಲ್ಲದ ಅವಧಿಯಲ್ಲೂ ಅವರು ದೇವೇಗೌಡರನ್ನೇ ಫೇಸ್ ಮಾಡಿದವರು” ಎಂದರು.
ತಂದೆಯ ಹೆಸರಿಲ್ಲದೆ ಗೆಲ್ಲುವ ಆತ್ಮವಿಶ್ವಾಸವಿದೆಯೇ?
ನೆರೆ ರಾಜ್ಯಗಳ ಉದಾಹರಣೆ ನೀಡಿದ ಚಲುವರಾಯಸ್ವಾಮಿ, “ತಮಿಳುನಾಡಿನ ಸ್ಟಾಲಿನ್ ಆಗಲಿ, ಆಂಧ್ರದ ಜಗನ್‌ಮೋಹನ್ ರೆಡ್ಡಿ ಆಗಲಿ ತಮ್ಮ ತಂದೆ ಇಲ್ಲದಿದ್ದರೂ ಸ್ವಂತ ಶಕ್ತಿಯಿಂದ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ನಿಮ್ಮ ತಂದೆಯವರಾದ ದೇವೇಗೌಡರ ಹೆಸರಿಲ್ಲದೆ ನೀವು ಗೆದ್ದು ಬರ್ತೀನಿ ಅನ್ನೋ ಆತ್ಮವಿಶ್ವಾಸ ನಿಮಗಿದೆಯೇ? ‘ಕಳೆದ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ’ ಎಂದು ಹೇಳಿದ್ದಿರಿ, ವಿಸರ್ಜನೆ ಮಾಡಿದ್ರಾ?” ಎಂದು ಹೆಚ್‌ಡಿಕೆಯನ್ನು ಪ್ರಶ್ನಿಸಿದರು.
